ನಜೀಬ್ ನಾಪತ್ತೆ ಪ್ರಕರಣ:ದಿಗ್ಭ್ರಮೆ ವ್ಯಕ್ತಪಡಿಸಿದ ಉಚ್ಚ ನ್ಯಾಯಾಲಯ

ಹೊಸದಿಲ್ಲಿ,ಫೆ.13: ಜೆಎನ್‌ಯು ವಿದ್ಯಾರ್ಥಿ ನಜೀಬ್ ಜಂಗ್ ನಾಪತ್ತೆಯಾಗಿ ಐದು ತಿಂಗಳುಗಳು ಕಳೆದಿದ್ದರೂ ಆತನ ಇರುವಿಕೆಯ ಕುರಿತು ಮಾಹಿತಿಯ ಕೊರತೆಯ ಬಗ್ಗೆ ದಿಲ್ಲಿ ಉಚ್ಚ ನ್ಯಾಯಾಲಯವು ಸೋಮವಾರ ದಿಗ್ಭ್ರಮೆ ವ್ಯಕ್ತಪಡಿಸಿತು. ಇದೇ ವೇಳೆ ಪ್ರಕರಣದ ತನಿಖೆಯನ್ನು ದಿಲ್ಲಿ ಪೊಲೀಸ್‌ನಿಂದ ಬೇರೆ ಯಾವುದಾದರೂ ಭದ್ರತಾ ಸಂಸ್ಥೆಗೆ ವಹಿಸುವಂತೆ ನಜೀಬ್ ಕುಟುಂಬವು ಕೋರಿಕೊಂಡಿತಾದರೂ ಅದನ್ನು ನ್ಯಾಯಾಲಯವು ಪುರಸ್ಕರಿಸಲಿಲ್ಲ.
ಇದು ತುಂಬ ವಿಚಿತ್ರವಾಗಿದೆ. ನಜೀಬ್ ನಾಪತ್ತೆಯಾಗಿ ಐದಾರು ತಿಂಗಳುಗಳು ಕಳೆದಿವೆ. ಆತನ ಬಗ್ಗೆ ಏನಾದರೂ ಮಾಹಿತಿ ದೊರೆಯಬೇಕಾಗಿತ್ತು. ಕೆಟ್ಟದ್ದೇ ಆಗಿದ್ದರೂ ಅದು ಈ ವೇಳೆಗಾಗಲೇ ಹೊರಬರಬೇಕಾಗಿತ್ತು ಎಂದು ಹೇಳಿದ ಪೀಠವು, ಇದು ತನ್ನನ್ನು ದಿಗ್ಭ್ರಾಂತಿಗೊಳಿಸಿದೆ ಎಂದಿತು.
ತನ್ನನ್ನು ಸುಳ್ಳು ಪತ್ತೆ ಪರೀಕ್ಷೆಗೊಳಪಡಿಸುವ ಆದೇಶವನ್ನು ಹಿಂದೆಗೆದುಕೊಳ್ಳುವಂತೆ ಕೋರಿ ಪ್ರಕರಣದಲ್ಲಿ ಶಂಕಿತ ಒಂಭತ್ತು ವಿದ್ಯಾರ್ಥಿಗಳ ಪೈಕಿ ಓರ್ವ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾಯಾಲಯವು ಈ ಅಭಿಪ್ರಾಯ ವ್ಯಕ್ತಪಡಿಸಿತು.





