ಕೊಲೆ ಪ್ರಕರಣ: ಅಪರಾಧಿಗಳಿಗೆ ಶಿಕ್ಷೆ
ಮಂಗಳೂರು, ಫೆ. 13: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಇಬ್ಬರು ಅಪರಾಧಿಗಳಿಗೆ ಇಲ್ಲಿನ ಒಂದನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 3 ವರ್ಷ ಶಿಕ್ಷೆ ಮತ್ತು 4 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಬಂಟ್ವಾಳ ಮಂಚಿ ನೂಜಿಪ್ಪಾಡಿಯ ನಿವಾಸಿ ವಾಸಪ್ಪ ಗೌಡ (50) ಮತ್ತಾತನ ಪತ್ನಿ ಯಮುನಾ (43) ಶಿಕ್ಷೆಗೊಳಗಾದವರು.
ದಂಡ ನೀಡಲು ತಪ್ಪಿದರೆ ಹೆಚ್ಚುವರಿ 2 ತಿಂಗಳ ಶಿಕ್ಷೆ ಹಾಗೂ ದಂಡ ಮೊತ್ತದಲ್ಲಿ ರೂ.5 ಸಾವಿರ ಮೃತ ಮಹಿಳೆಯ ಗಂಡನಿಗೆ ಪರಿಹಾರ ರೂಪದಲ್ಲಿ ನೀಡುವಂತೆ ನ್ಯಾಯಾಧೀಶರು ಸಿ.ಎಂ. ಜೋಷಿ ನೀಡಿದ ತೀರ್ಪಿನಲ್ಲಿ ಆದೇಶಿಸಿದ್ದಾರೆ.
ಘಟನೆ
2014ರ ಫೆಬ್ರವರಿ18ರಂದು ಮುಂಜಾನೆ ಮೋನಕ್ಕ (38) ಕೊಲೆಯಾಗಿದ್ದರು. ಅಪರಾಧಿಗಳು ಮತ್ತು ಕೊಲೆಯಾದವರು ನೆರೆಹೊರೆಯ ಮನೆಯವರಾಗಿದ್ದು, ಕೋಳಿ ವಿಚಾರವಾಗಿ ಮಾತಿನ ಚಕಮಕಿ ನಡೆದು ಮೋನಕ್ಕ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಲಾಗಿತ್ತು. ಗಾಯಾಳು ಮೋನಕ್ಕರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಫೆ.19ರಂದು ಸಂಜೆ 6 ಗಂಟೆಗೆ ಮೃತರಾಗಿದ್ದರು.
ಅಂದಿನ ಬಂಟ್ವಾಳ ಗ್ರಾಮಾಂತರ ಠಾಣಾ ಅಧಿಕಾರಿ ರಾಜಶೇಖರ್ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದಿನ ವೃತ್ತ ನಿರೀಕ್ಷಕ ಬಿ.ಕೆ. ಮಂಜಯ್ಯ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ 18 ಮಂದಿ ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿತ್ತು.







