ಕನಿಮೋಳಿ ಮನೆಗೆ ಕಳ್ಳರ ಲಗ್ಗೆ

ಚೆನ್ನೈ, ಫೆ.13: ಮಾಜಿ ಕೇಂದ್ರ ಸಚಿವೆ ಮತ್ತು ಡಿಎಂಕೆಯ ರಾಜ್ಯಸಭಾ ಸದಸ್ಯೆ ಕನಿಮೋಳಿ ಅವರ ಚೆನ್ನೈನ ಸಿಐಟಿ ಕಾಲನಿಯ ಮನೆಗೆ ಕಳ್ಳನೊಬ್ಬ ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡಸಿದ ಘಟನೆ ವರದಿಯಾಗಿದೆ.
ಸಂಸದೆ ಕನಿಮೋಳಿ ಈ ಸಂದರ್ಭದಲ್ಲಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಕಳ್ಳ ಮನೆಯ ಇಬ್ಬರು ಕೆಲಸದಾಳುಗಳನ್ನು ರೂಮ್‌ನಲ್ಲಿ ಕೂಡಿ ಹಾಕಿದ ಎನ್ನಲಾಗಿದೆ. ಬಳಿಕ ಕನಿಮೋಳಿ ತಾಯಿ ರಾಜಾತಿ ಅಮ್ಮಾಳ್ ಅವರಿಗೆ ಪಿಸ್ತೂಲ್ ತೋರಿಸಿ ಚಿನ್ನಾಭರಣ ನೀಡುವಂತೆ ಬೆದರಿಕೆ ಹಾಕಿದ ಎಂದು ತಿಳಿದು ಬಂದಿದೆ. ಆಗ ರಾಜಾತಿ ಅಮ್ಮಾಳ್ ಕಳ್ಳನಿಗೆ ಕೆಳಮಹಡಿಯಲ್ಲಿ ಚಿನ್ನ ಇದೆ ಎಂದು ಹೇಳಿದರು. ಕಳ್ಳ ಕೆಳಮಹಡಿಗೆ ತೆರಳುತ್ತಿದ್ದಂತೆ ರಾಜಾತಿ ಅಮ್ಮಾಳ್ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಳಿಕ ಕಳ್ಳನನ್ನು ವಶಕ್ಕೆ ತೆಗೆದುಕೊಂಡರು. ಆತ ತನ್ನ ಹೆಸರು ಪ್ರಶಾಂತ್ ಎಂದು ಪೊಲೀಸರ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಕನಿಮೋಳಿ ಪಕ್ಷದ ಉನ್ನತ ಮಟ್ಟದ ಸಭೆಗೆ ತೆರಳಿದ್ದರು. ಬಳಿಕ ಮನೆಗೆ ಆಗಮಿಸಿದ ಅವರಿಗೆ ಮಾಹಿತಿ ನೀಡಲಾಯಿತು.





