ಸಾಮಾಜಿಕ ಜಾಲ ತಾಣದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ತಂದರೆ ಕ್ರಮ: ಎಚ್ಚರಿಕೆ
ಚಿಕ್ಕಮಗಳೂರು, ಫೆ.13: ಸಮಾಜಘಾತುಕ ವ್ಯಕ್ತಿಗಳು ಅಂತರ್ಜಾಲ ಮಾಧ್ಯಮಗಳ ಮೂಲಕ ಕಾನೂನು ಸುವ್ಯವಸ್ಥೆಗೆ ಭಂಗ ತಂದರೆ ಕಾನೂನು ರೀತಿಯ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಪಿ. ಹರಿಶೇಖರನ್ ತಿಳಿಸಿದ್ದಾರೆ.
ಅಂತರ್ಜಾಲ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟ್ಟರ್, ವಾಟ್ಸ್ ಆ್ಯಪ್, ವಿ-ಚಾಟ್, ಸ್ಕೈಪ್ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸಂದೇಶಗಳನ್ನು ಬಿತ್ತರಿಸಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟುಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿರುವ ಅವರು, ಈ ಸಂಬಂಧ ಐಪಿಸಿ ಕಲಂ 153-ಎ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಯಾವುದೇ ಮಾಧ್ಯಮಗಳಲ್ಲಿ ತಪ್ಪುಸಂದೇಶಗಳನ್ನು ಹರಡುವುದು ಕಾನೂನಿಗೆ ವಿರುದ್ಧವಾಗಿದೆ. ವಿವಿಧ ಗುಂಪುಗಳ ನಡುವೆ ಮತ, ಮೂಲವಂಶ, ಜನ್ಮಸ್ಥಳ, ನಿವಾಸ, ಭಾಷೆ, ಇತ್ಯಾದಿಗಳ ಆಧಾರದ ಮೇಲೆ ದ್ವೇಷವನ್ನು ಉಂಟು ಮಾಡುವುದು ಮತ್ತು ಸೌಹಾರ್ದತೆಗೆ ಬಾಧಕವಾಗುವ ಕೃತ್ಯಗಳನ್ನು ಮಾಡುವುದು.
ಆಡಿದ ಮಾತುಗಳಿಂದ ಇಲ್ಲವೇ ಬರೆದ ಶಬ್ದಗಳಿಂದ, ದೃಶ್ಯ ನಿರೂಪಣೆಗಳಿಂದ ಅಥವಾ ಬೇರೆ ರೀತಿಯಲ್ಲಿ ವಿವಿಧ ಮತೀಯ, ಮೂಲವಂಶೀಯ, ಭಾಷಿಕ ಅಥವಾ ಪ್ರಾದೇಶಿಕ ಗುಂಪುಗಳು, ಕೋಮುಗಳ ನಡುವಿನ ಶಾಂತಿ ಮತ್ತು ಸೌಹಾದರ್ತೆಗೆ ಧಕ್ಕೆಯುಂಟಾಗುವ ಅಪಾಯವಿದ್ದು, ಈ ಹಿನ್ನೆಲೆಯಲ್ಲಿ ಕಲಂ 153-ಎ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ವೈರತ್ವ, ದ್ವೇಷ, ವೈಮನಸ್ಯದ ಭಾವನೆಗಳನ್ನು ಹುಟ್ಟು ಹಾಕುವುದು ಮತ್ತು ಹೆಚ್ಚಿಸುವುದು, ಜಾತಿ-ಕೋಮುಗಳ ನಡುವಣ ಸೌಹಾರ್ದಕ್ಕೆ ಬಾಧಕವಾಗುವ ಯಾವುದೇ ಕೃತ್ಯವನ್ನು ಮಾಡುವ ಮೂಲಕ ಸಾರ್ವಜನಿಕ ನೆಮ್ಮದಿಯನ್ನು ಕದಡಿದರೆ ಅಥವಾ ಕದಡುವ ಸಂಭವವಿದ್ದರೆ ಅಂತಹ ವ್ಯಕ್ತಿಗಳಿಗೆ 3 ವರ್ಷಗಳ ಜೈಲು, ದಂಡ ಅಥವಾ ಎರಡರಿಂದಲೂ ದಂಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಅಂತರ್ಜಾಲ ಮಾಧ್ಯಮಗಳ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುವಂತಹಾ ಕೆಲಸಗಳನ್ನು ಮಾಡಿದರೆ ಐಪಿಸಿ ಕಲಂ 153(ಎ) ಹಾಗೂ ಕಲಂ 66(ಎ) ಐ.ಟಿ., ಕಾಯ್ದೆ ಪ್ರಕಾರ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹರಿಶೇಖರನ್‌ಎಚ್ಚರಿಕೆ ನೀಡಿದ್ದಾರೆ.







