ಮಾನಸಿಕ ಸ್ಥಿಮಿತ ಕಳೆದುಕೊಂಡ ಬಿಎಸ್‌ವೈ: ದಿನೇಶ್ ಗುಂಡೂರಾವ್ ವ್ಯಂಗ್ಯ

ಮಡಿಕೇರಿ, ಫೆ.13: ಆಧಾರ ರಹಿತವಾದ ಅರ್ಥಹೀನ ಆರೋಪ ಮಾಡುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮಾನಸಿಕ ಸ್ಥಿಮಿತ ಕಳೆದು ಕೊಂಡವರಂತೆ ವರ್ತಿಸುತ್ತಿದ್ದಾರೆ ಎಂದು ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ದಿನೇಶ್ ಗುಂ ೂರಾವ್ ಆರೋಪಿಸಿದ್ದಾರೆ.
ನಗರದ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಗತ್ಯ ಆರೋಪಗಳನ್ನು ಮಾಡುವ ಮೂಲಕ ರಾಜ್ಯದ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಸಂಚು ರೂಪಿಸುತ್ತಿದೆ ಎಂದು ಟೀಕಿಸಿದರು.
ಈ ಹಿಂದೆ ಮೂವರು ಸಚಿವರು ರಾಜೀ ನಾಮೆ ನೀಡುತ್ತಾರೆ, ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳಲು ವರಿಷ್ಠರಿಗೆ ಒಂದು ಸಾವಿರ ಕೋಟಿ ಹಣ ನೀಡಿದ್ದಾರೆ ಎಂಬಿತ್ಯಾದಿ ಹೇಳಿಕೆಗಳ ಮೂಲಕ ಯಡಿಯೂರಪ್ಪ ಹುಸಿ ಬಾಂಬ್ ಸಿಡಿಸಿ ರಾಜ್ಯದ ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪಿದರು.
ಮುಖ್ಯಮಂತ್ರಿಗಳು ಹಣ ನೀಡಿದ್ದಕ್ಕೆ ದಾಖಲೆಗಳಿದ್ದಲ್ಲಿ ಬಹಿರಂಗಪಡಿಸಲಿ ಅಥವಾ ಕಾಂಗ್ರೆಸ್ಸಿಗರೇ ಮಾಹಿತಿ ನೀಡಿದ್ದಲ್ಲಿ ಅವರ ಹೆಸರನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ ದಿನೇಶ್ ಗುಂಡೂರಾವ್, ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯ ವಕ್ತಾರರಂತೆ ಯಡಿಯೂರಪ್ಪ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಯಾವುದೇ ರೀತಿಯ ತನಿಖೆ ನಡೆಸಲು ಮುಂದಾದಲ್ಲಿ ಅದನ್ನು ಎದುರಿಸಲು ಕಾಂಗ್ರೆಸ್ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.
ತಮ್ಮ ಅಧಿಕಾರಾವಧಿಯಲ್ಲಿ ದೇಶದಲ್ಲಿಯೇ ನಂಬರ್ ಒನ್ ಭ್ರಷ್ಟಾಚಾರಿ ಎಂಬ ಆರೋಪಕ್ಕೆ ಗುರಿಯಾಗಿದ್ದ ಯಡಿಯೂರಪ್ಪ, ಜೈಲಿಗೂ ಹೋಗಿ ಬಂದ ಇತಿಹಾಸ ಹೊಂದಿದ್ದು, ಇಂತಹವರಿಂದ ಹಿತವಚನ ಪಾಠದ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಮುಕ್ತ ಭಾರತ ಮಾಡಲು ಬಿಜೆಪಿ ಸಾಕಷ್ಟು ಒಳಸಂಚುಗಳನ್ನು ಮಾಡುತ್ತಿದೆ. ದ್ವೇಷದ ರಾಜಕಾರಣದ ಮೂಲಕ ಕಾಂಗ್ರೆಸ್ ನಾಯಕರನ್ನು ತುಳಿಯುವ ಪ್ರಯತ್ನಕ್ಕೂ ಮುಂದಾಗಿದೆ ಎಂದು ಆರೋಪಿಸಿದರು.







