ಲಾರಿ ಮಾಲಕನಿಂದ ಚಾಲಕನ ಅಪಹರಣ: ಆರೋಪ
ಚಿಕ್ಕಮಗಳೂರು, ಫೆ.13: ಯುವಕನೋರ್ವನನ್ನು ಅಪಹರಿಸಲಾಗಿದ್ದು, ತಕ್ಷಣ ಹುಡುಕಿ ಕೊಡುವಂತೆ ಒತ್ತಾಯಿಸಿ ಯುವಕನ ಪೋಷಕರು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದಾರೆ.
ಚಿಕ್ಕಮಗಳೂರು ನಗರದ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆಯ ಶಾಂತಿನಗರ ಎಂಬಲ್ಲಿ ವಾಸವಿರುವ ನರಸಮ್ಮ ಮತ್ತು ಲಕ್ಷ್ಮಣ ಮಹಾರಾಜು ಎಂಬ ದಂಪತಿಯ ಪುತ್ರ ಮಣಿಕಂಠ(24) ಎಂಬವನನ್ನು ಅಪಹರಿಸಿರುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಝಹೀರ್ ಎಂಬವರಿಗೆ ಸೇರಿದ ಲಾರಿಯಲ್ಲಿ ಮಣಿಕಂಠ ಹಲವು ವರ್ಷಗಳಿಂದ ಲಾರಿ ಚಾಲಕನಾಗಿ ಕೂಲಿ ಕೆಲಸ ಮಾಡುತ್ತಿದ್ದ. ಲಕ್ಷ್ಮಣ ಮಹಾರಾಜು ಫೆ.7ರಂದು ಧಾರ್ಮಿಕ ಕೆಲಸದ ನಿಮಿತ್ತ ಕುರುಬರಹಳ್ಳಿಗೆ ಹೋಗಿರುವ ಸಮಯದಲ್ಲಿ ಸುಮಾರು ರಾತ್ರಿ 10ಗಂಟೆಗೆ ಅಪಹರಣ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೆಲಸಕ್ಕೆ ಹೋಗಿದ್ದ ಮಗ ಬಂದು 3/4 ದಿನಗಳೇ ಕಳೆದಿದ್ದು, ನನ್ನ ಮಗನ ಬಗ್ಗೆ ಲಾರಿ ಮಾಲಕ ಝಹೀರ್ ಬಳಿ ವಿಚಾರಿಸಿದಾಗ ಅತನ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ. ಅನುಮಾನಗೊಂಡು ಇತರ ಸ್ನೇಹಿತರ ಬಳಿ ವಿಚಾರಿಸಿದಾಗ ಫೆ.7ರಂದು ಸುಮಾರು ರಾತ್ರಿ 10 ಗಂಟೆಗೆ ನಾನು ಮನೆಯಲ್ಲಿ ಇಲ್ಲದ ಸಮಯದಲ್ಲಿ ಬಲವಂತವಾಗಿ ಅಪಹರಿಸಿದ್ದಾರೆ ಎಂದು ಲಕ್ಷ್ಮಣ ಮಹಾರಾಜು ಎಸ್ಪಿ ಬಳಿ ಅಳಲು ತೋಡಿಕೊಂಡಿದ್ದಾರೆ.
ಲಾರಿ ಮಾಲಕ ಝಹೀರ್,ಮುಬ್ಬಾ,ಅಮೀರ್, ಇಮ್ಮು, ಷಹರಾಝ್, ನವೀನ, ಸಂತೆ ಮಾರ್ಕೆಟಿನ ಕಬೀರ್, ಇರ್ಫಾನ್, ಟಮೋಟೋ ಮುಂತಾದವರು ನನ್ನ ಮಗನನ್ನು ಬಲಪ್ರಯೋಗಿಸಿ ಅಪಹರಿಸಿರುವ ಬಲವಾದ ಶಂಕೆ ಇದೆ. ನಮ್ಮ ಕುಟುಂಬಕ್ಕೆ ಜೀವನಾಧಾರವಾಗಿದ್ದ ಮಣಿಕಂಠನ ಪ್ರಾಣಕ್ಕೆ ಸಂಚಕಾರವಾಗಿರುವ ಬಗ್ಗೆ ಅನುಮಾನವಿದೆ.ಅಲ್ಲದೆ ಈ ಎಲ್ಲಾ ಜನರು ನಾನು ಒಂಟಿಯಾಗಿರುವ ಸಮಯದಲ್ಲಿ ನನ್ನ ಮನೆಗೆ ಬಂದು ದೈಹಿಕವಾಗಿ, ಮಾನಸಿಕವಾಗಿ ಹಲ್ಲೆಗೆ ಪ್ರಯತ್ನಿಸಿದ್ದು,ಜೀವ ಬೆದರಿಕೆಯನ್ನು ಹಾಕಿದ್ದಾರೆಂದು ದೂರಿದ್ದಾರೆ.







