ಹೃದಯಾಘಾತ: ವ್ಯಕ್ತಿ ಸಾವು
ಕಾರವಾರ, ಫೆ.13: ಲಾರಿಯೊಂದರಲ್ಲಿ ಪರಿಚಿತ ವ್ಯಕ್ತಿಯೊಂದಿಗೆ ಜಮಖಂಡಿಗೆ ತೆರಳಿದ್ದ ವ್ಯಕ್ತಿಯು ಹೃದಯಘಾತದಿಂದಾಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಕೊಂಕಣವಾಡಾದಲ್ಲಿ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿ ತಾಲೂಕಿನ ಕೊಂಕಣವಾಡಾದ ನಿವಾಸಿ ಸಂತೋಷ ದೇವಳಕರ್(35) ತಿಳಿದುಬಂದಿದೆ. ಕಳೆದ ಫೆ.9ರಂದು ಮೃತ ಸಂತೋಷ, ರಫೀಕ್ ಜೊತೆಗೆ ಜೋಳ ತರಲು ಕಾರವಾರದಿಂದ ಜಮಖಂಡಿಗೆ ಲಾರಿಯಲ್ಲಿ ತೆರಳಿದ್ದರು. ಲಾರಿ ಮೂಲಕ ಜಮಖಂಡಿಗೆ ತಲುಪಿದಾಗ ಸಂತೋಷ ಅವರಿಗೆ ಎದೆ ಭಾಗದಲ್ಲಿ ತೀವ್ರ ನೋವು ಆರಂಭವಾಯಿತು ಎನ್ನಲಾಗಿದೆ. ಬಳಿಕ ಜೋಳವನ್ನು ಲಾರಿಯಲ್ಲಿ ತುಂಬಿಸಿಕೊಳ್ಳುವ ಮೊದಲು ರಫೀಕ್ ಚಹಾ ಕುಡಿಯಲು ಹೊಟೇಲ್‌ಗೆ ತೆರಳಿದ್ದರು.
ಈ ಸಂದರ್ಭದಲ್ಲಿ ಸಂತೋಷ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ರಫೀಕ್ ಜಮಖಂಡಿಯ ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಲಾರಿಯಲ್ಲೇ ಹಾಕಿಕೊಂಡು ಮೃತ ದೇಹವನ್ನು ಕಾರವಾರಕ್ಕೆ ತಂದಿದ್ದಾರೆ. ಸಂತೋಷ ಅವರ ಸಂಬಂಧಿಕರು ರಫೀಕ್ ಮೇಲೆ ಅನುಮಾನಗೊಂಡು ಪ್ರಕರಣ ದಾಖಲಿಸಲು ಮುಂದಾಗಿದ್ದರು.
ಆದರೆ ಕಾರವಾರದ ಸಿವಿಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದಾಗ ಸಂತೋಷ ಅವರಿಗೆ ಹೃದಯಾಘಾತವಾಗಿದ್ದು ಖಚಿತವಾಗಿದೆ ಎಂದು ಚಿತ್ತಾಕುಲಾ ಪೊಲೀಸರು ತಿಳಿಸಿದ್ದಾರೆ.







