ರಾಷ್ಟ್ರಮಟ್ಟದ ಅಂತರ ಕಾಲೇಜು ಸ್ಪರ್ಧೆ "ಓಯಸಿಸ್ 2017" ಉದ್ಘಾಟನೆ

ಬಂಟ್ವಾಳ, ಫೆ. 13: ಪಠ್ಯದ ಜೊತೆಯಲ್ಲಿ ಸಹಪಠ್ಯ ಚಟುವಟಿಕೆಗಳಿದ್ದಾಗ ನಮ್ಮ ಕಲಿಕೆ ಅರ್ಥಪೂರ್ಣವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಲಾಚಟುವಟಿಕೆಗಳ ಕುರಿತಾಗಿ ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್ ಹೇಳಿದರು. ಮೊಡಂಕಾಪುವಿನ ಕಾರ್ಮೆಲ್ ಕಾಲೇಜು ಆಯೋಜಿಸಿದ್ದ ರಾಷ್ಟ್ರಮಟ್ಟದ ಅಂತರ ಕಾಲೇಜು ಸ್ಪರ್ಧೆ "ಓಯಸಿಸ್ 2017" ಉದ್ಘಾಟಿಸಿ ಅವರು ಮಾತನಾಡಿದರು.
ಅಂಕ ಕೇಂದ್ರಿತವಾದ ಶಿಕ್ಷಣ ನಮಗೆ ಸಮಸ್ಯೆಗಳನ್ನು ಎದುರಿಸುವುದನ್ನು ಕಲಿಸುವುದಿಲ್ಲ. ಗುಣಾತ್ಮಕ ಶಿಕ್ಷಣ ಮಾತ್ರ ಬದುಕುವುದನ್ನು ಕಲಿಸುತ್ತದೆ ಮತ್ತು ಸಮಸ್ಯೆಗಳನ್ನು ನಿಭಾಯಿಸುವ ಮನಸ್ಥಿತಿಯನ್ನು ಬೆಳೆಸುತ್ತದೆ ಎಂದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಪ್ರೊ. ಎಂ.ಸುಪ್ರಿಯಾ ಎ.ಸಿ. ವಹಿಸಿದ್ದರು. ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದ ಜೆಸನ್ ಪಿಂಟೋರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಕಾರ್ಮೆಲ್ ಸಂಸ್ಥೆಗಳ ಜಂಟಿ ಕಾರ್ಯದರ್ಶಿನಿ ಭಗಿನಿ ಎಂ. ಉಜ್ವಲ ಎ.ಸಿ. ಹಾಗೂ ಕಾರ್ಯಕ್ರಮದ ಸಂಯೋಜಕ ಪ್ಲೋರಿನ್ ಮೆನೇಜಸ್, ಸಹ ಸಂಯೋಜಕಾ ಜೋಯೆಲ್ ಮಸ್ಕರೇನಸ್, ವಿದ್ಯಾರ್ಥಿ ಸಂಯೋಜಕ ಜೇಸನ್ ಪಿಂಟೋ, ಸಹ ಸಂಯೋಜಕಿ ಸಹರಾ ಬಾನು ವಿದ್ಯಾರ್ಥಿ ಸಂಘದ ನಾಯಕಿ ಆಶಾ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.
ಆಶಾ ಡಿಸೋಜ ಸ್ವಾಗತಿಸಿದರು. ಸಹ ಸಂಯೋಜಕ ಜೋಯೆಲ್ ಮಸ್ಕರೇನಸ್ ವಂದಿಸಿದರು. ಜೇಸನ್ ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ನಂತರ ಸುಮಾರು 7 ವಿಭಾಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿವಿಧ ಕಾಲೇಜುಗಳಿಂದ ಹಲವಾರು ಸ್ಪರ್ಧಾಳುಗಳು ಭಾಗವಹಿಸಿ, ಪ್ರತಿಭೆಗಳನ್ನು ಅನಾವರಣಗೊಳಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಕಾರ್ಮೆಲ್ ಕಾಲೇಜಿನ ಹಳೆ ವಿದ್ಯಾರ್ಥಿ ಅಹ್ಮದ್ ಬಶೀರ್ ಆಗಮಿಸಿ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಮಂಗಳೂರಿನ ರೋಷನಿ ನಿಲಯ ಕಾಲೇಜು ಚಾಂಪಿಯನ್ಸ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡರೆ ಅಮೃತ ಕಾಲೇಜು ಪಡೀಲ್ ದ್ವಿತೀಯ ಚಾಂಪಿಯನಾಗಿ ಹೊರಹೊಮ್ಮಿತು.







