ಹೊಟ್ಟೆಪಾಡಿಗೆ ನಾಲ್ಕು ವರ್ಷ ಕಿತ್ತಳೆ ಮಾರಿದ ಅಸ್ಸಾಂ ಬಿಲ್ಲುಗಾರ್ತಿ
ಕೊನೆಗೂ ಎಚ್ಚೆತ್ತ ರಾಜ್ಯ ಸರಕಾರದಿಂದ ಉದ್ಯೋಗದ ಭಾಗ್ಯ

ಗುವಾಹಟಿ,ಎ.13: ಒಂದು ಕಾಲದಲ್ಲಿ ರಾಷ್ಟ್ರಮಟ್ಟದ ಆರ್ಚರಿ ಆಗಿ ಮಿಂಚಿದ್ದ ಅಸ್ಸಾಂನ ಬುಲಿ ಬಸುಮತಾರಿ ಜೀವನ ನಿರ್ವಹಣೆಗಾಗಿ ಕಳೆದ ನಾಲ್ಕು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ-31ರಲ್ಲಿ ಕಿತ್ತಳೆ ಹಣ್ಣುಗಳನ್ನು ಮಾರುತ್ತಿದ್ದಾರೆ. ಗಾಯದ ಸಮಸ್ಯೆ ಹಾಗೂ ಕಿತ್ತು ತಿನ್ನುವ ಬಡತನದಿಂದಾಗಿ ಬುಲಿ ಆರ್ಚರಿಗೆ ಗುಡ್‌ಬೈ ಹೇಳಿ ರಸ್ತೆಬದಿಯಲ್ಲಿ ಹಣ್ಣು ಮಾರುವ ಕಾಯಕಕ್ಕೆ ಇಳಿದಿದ್ದರು.
ಅಸ್ಸಾಂ ಬಿಲ್ಲುಗಾರ್ತಿಯ ದುಃಸ್ಥಿತಿಯ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ತಕ್ಷಣ ಎಚ್ಚೆತ್ತುಕೊಂಡ ರಾಜ್ಯ ಕ್ರೀಡಾ ಸಚಿವ ನಬಾ ಕುಮಾರ್ ಬಿಲ್ಲುಗಾರ್ತಿಯನ್ನು ತನ್ನ ಕಚೇರಿಗೆ ಆಹ್ವಾನಿಸಿ ಅಸ್ಸಾಂ ಆರ್ಚರಿ ತಂಡದ ಅಧಿಕೃತ ಕೋಚ್ ಹುದ್ದೆಯ ಆಫರ್ ನೀಡಿದ್ದು, ಮುಂದಿನ ವಾರ ನೇಮಕಾತಿ ಪತ್ರ ನೀಡುವುದಾಗಿ ಭರವಸೆ ನೀಡಿದ್ದಾರೆ.
‘‘ನಾನು ತುಂಬಾ ಪ್ರೀತಿಸುವ ಆರ್ಚರಿ ಕ್ರೀಡೆಗೆ ಮತ್ತೆ ವಾಪಸಾಗುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಸಚಿವರು ನನಗೆ ಕೋಚ್ ಹುದ್ದೆಯ ಆಫರ್ ನೀಡಿದ್ದಾರೆ. ನನಗೆ ಇನ್ನು ಮುಂದೆ ಕಿತ್ತಳೆ ಮಾರಾಟ ಮಾಡುವ ಪರಿಸ್ಥಿತಿ ಬಾರದೆಂಬ ವಿಶ್ವಾಸದಲ್ಲಿದ್ದೇನೆ’’ ಎಂದು ಬುಲಿ ಹೇಳಿದ್ದಾರೆ.
28ರ ಪ್ರಾಯದ ಎರಡು ಮಕ್ಕಳ ತಾಯಿ ಬುಲಿ ಸುಮಾರು ಆರು ವರ್ಷಗಳ ಕಾಲ ಸಬ್ ಜೂನಿಯರ್‌ನಿಂದ ಸೀನಿಯರ್ ಮಟ್ಟದ ತನಕದ ಆರ್ಚರಿಯಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. 2003ರಲ್ಲಿ 8ನೆ ತರಗತಿಯಲ್ಲಿ ಓದುತ್ತಿದ್ದಾಗ ಪ್ರತಿಭಾನ್ವೇಷಣೆಯಲ್ಲಿ ಬಿಲ್ಲುಗಾರ್ತಿ ಆಗಿ ಆಯ್ಕೆಯಾಗಿದ್ದ ಅವರು ಮೊದಲ ಜಿಲ್ಲಾ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದರು.
2005ರಲ್ಲಿ ಅಜ್ಮೇರ್‌ನಲ್ಲಿ ಸಬ್ ಜೂನಿಯರ್ ವಿಭಾಗದಲ್ಲಿ ಮೊದಲ ಬಾರಿ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಆಡಿದ್ದರು. ಆ ಟೂರ್ನಿಯಲ್ಲಿ 2 ಚಿನ್ನ ಹಾಗೂ 1 ಬೆಳ್ಳಿ ಗೆದ್ದುಕೊಂಡಿದ್ದರು. 2006ರಲ್ಲಿ ಅಮರಾವತಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ತಲಾ 1 ಚಿನ್ನ, ಬೆಳ್ಳಿ ಜಯಿಸಿದ್ದರು. ಆ ಬಳಿಕ ಔರಂಗಾಬಾದ್‌ನಲ್ಲಿ ನಡೆದ ನ್ಯಾಶನಲ್ ಜೂನಿಯರ್ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಮತ್ತೊಮ್ಮೆ ಚಿನ್ನ, ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದರು.
2007ರಲ್ಲಿ ಜಾರ್ಖಂಡ್‌ನಲ್ಲಿ ನಡೆದ ಹಿರಿಯ ಮಟ್ಟದ ಟೂರ್ನಿಯಲ್ಲಿ ಚಿನ್ನಕ್ಕೆ ಗುರಿ ಇಟ್ಟಿದ್ದರು. ಆದರೆ, 2010ರಲ್ಲಿ ಅವರ ಜೀವನದಲ್ಲಿ ಕಠೋರ ತಿರುವು ಉಂಟಾಯಿತು. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ತವರಿಗೆ ವಾಪಸಾಗಿದ್ದರು. ಕುಗ್ರಾಮದಲ್ಲಿ ನೆಲೆಸಿರುವ ತಂದೆ-ತಾಯಿಗೆ ತನ್ನ ಬಗ್ಗೆ ಹೆಚ್ಚು ಗಮನ ನೀಡಲು ಕಷ್ಟವಾಯಿತು. ಆಕೆ 2010ರಲ್ಲಿ ಮದುವೆಯಾದರು. ಎರಡು ಮಕ್ಕಳಿಗೆ ಜನ್ಮ ನೀಡಿದರು.
ಆ ಬಳಿಕ ಅವರು ಆರ್ಚರಿ ರೇಂಜ್‌ನತ್ತ ಮುಖಮಾಡಲು ಸಾಧ್ಯವಾಗಲಿಲ್ಲ. ಬಡಕುಟುಂಬವಾಗಿದ್ದ ಕಾರಣ ಆರ್ಚರಿ ಖರೀದಿಸುವಷ್ಟು ಆರ್ಥಿಕ ಶಕ್ತಿಯಿರಲಿಲ್ಲ. ಕೇವಲ ಒಂದು ಬಿಲ್ಲು 2.5 ಲಕ್ಷ ರೂ. ಬೆಲೆಬಾಳುತ್ತದೆ. ಬುಲಿ ಪತಿ ದಿನಗೂಲಿಯಾಗಿದ್ದ ಕಾರಣ ಹಣಕಾಸು ಬಿಕ್ಕಟ್ಟು ಹೆಚ್ಚಾಯಿತು. ನಾಲ್ಕು ವರ್ಷಗಳ ಹಿಂದೆ ಸ್ವಲ್ಪ ಹಣ ಒಟ್ಟುಗೂಡಿಸಿ ಆರೆಂಜ್ ಮಾರಾಟ ಮಾಡಲು ನಿರ್ಧರಿಸಿದ ಬುಲಿ ಎನ್‌ಎಚ್-31ರ ರಸ್ತೆ ಬದಿಯಲ್ಲಿ ಹಣ್ಣು ವ್ಯಾಪಾರ ಮಾಡಲು ಆರಂಭಿಸಿದರು.
ಪ್ರತಿದಿನ 150ರಿಂದ 200 ರೂ. ಆದಾಯ ಗಳಿಸುತ್ತಿದ್ದರು. ಇದು ಸಂಸಾರ ನಿರ್ವಹಣೆಗೆ ನೆರವಾಗುತ್ತಿತ್ತು. ಆದರೆ, ಸಾಕಾಗುತ್ತಿರಲಿಲ್ಲ. ಹೆಣ್ಣು ಮಕ್ಕಳು ದೊಡ್ಡವರಾಗುತ್ತಲೇ ಆರ್ಚರಿ ಮೇಲಿನ ಪ್ರೀತಿ ಕೂಡ ದೂರವಾಗುತ್ತಾ ಹೋಯಿತು.







