ನೀತಿ ಸಂಹಿತೆ ಉಲ್ಲಂಘಿಸಿ ಬಿಜೆಪಿ ಪರ ಮತದಾನೋತ್ತರ ಸಮೀಕ್ಷೆ ಪ್ರಕಟ
ದೈನಿಕ್ ಜಾಗರಣ್ ಪತ್ರಿಕಾ ಮಾಲಕರ ಮೇಲೆ ಪೊಲೀಸ್ ದಾಳಿ

ಲಕ್ನೋ,ಫೆ.13: ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ, ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿದ ದೈನಿಕ್ ಜಾಗರ್ ಪತ್ರಿಕೆಯ ಮಾಲಕರ ಕಾನ್ಪುರ, ಗಾಝಿಯಾಬಾದ್ ಹಾಗೂ ನೊಯ್ಡಿದಲ್ಲಿರುವ ಮಾಲಕರ ಕಚೇರಿ ಹಾಗೂ ನಿವಾಸಗಳ ಮೇಲೆ ಉತ್ತರಪ್ರದೇಶ ಪೊಲೀಸರು ಸೋಮವಾರ ರಾತ್ರಿ ದಾಳಿ ನಡೆಸಿದ್ದಾರೆ.
ಚುನಾವಣೋತ್ತರ ಸಮೀಕ್ಷೆಯ ಪ್ರಕಟಣೆಯಲ್ಲಿ ಶಾಮೀಲಾಗಿರುವ ಎಲ್ಲಾ ಏಜೆನ್ಸಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ 188 ಸೆಕ್ಷನ್ ಹಾಗೂ ಜನತಾ ಪ್ರಾತಿನಿಧ್ಯ ಕಾಯ್ದೆಯ 126ಎ ಹಾಗೂ 126ಬಿ ಅಡಿ ತಕ್ಷಣವೇ ಎಫ್‌ಐಆರ್ ಸಲ್ಲಿಸುವಂತೆ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆದ ಜಿಲ್ಲೆಗಳ ಚುನಾವಣಾಧಿಕಾರಿಗಳಿಗೆ ಚುನಾವಣಾ ಆಯೋಗ ಸೋಮವಾರ ಸೂಚನೆ ನೀಡಿತ್ತು.
ಚುನಾವಣಾ ಆಯೋಗದ ಮಾರ್ಗದರ್ಶಿ ಸೂತ್ರಗಳನ್ನು ರಾಜಾರೋಷವಾಗಿ ಉಲ್ಲಂಘಿಸಿದ ದೈನಿಕ ಜಾಗರಣ್ ಪತ್ರಿಕೆಯು, ಉತ್ತರಪ್ರದೇಶದಲ್ಲಿ ಇನ್ನೂ ಆರು ಹಂತಗಳ ಮತದಾನ ಬಾಕಿಯಿರುವಾಗಲೇ ಮತದಾನೋತ್ತರ ಸಮೀಕ್ಷೆಯನ್ನು ಪ್ರಕಟಿಸಿತ್ತು.
ಬಿಜೆಪಿ ಪರ ನಿಲುವನ್ನು ಹೊಂದಿದೆಯೆನ್ನಲಾದ ಈ ಪತ್ರಿಕೆಯು, ಫೆ.11ರಂದು ನಡೆದ ಮೊದಲ ಹಂತದಲ್ಲಿ ಮತದಾನದಲ್ಲಿ ಪಾಲ್ಗೊಂಡಿದ್ದವರಲ್ಲಿ ಸುಮಾರು 5700 ಮತದಾರರ ನ್ನು ಸಂಪರ್ಕಿಸಿ, ಸಮೀಕ್ಷೆಯನ್ನು ಪ್ರಕಟಿಸಿತು.
ನೀತಿ ಸಂಹಿತೆಯನ್ನು ಉಲ್ಲಂಘಿಸಿ ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪತ್ರಿಕೆಯ ಓದುಗರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪತ್ರಿಕೆಯು ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಸಮೀಕ್ಷಾವರದಿಯನ್ನು ತೆಗೆದುಹಾಕಿದೆಯೆಂದು ಮೂಲಗಳು ತಿಳಿಸಿವೆ.







