ಲಕ್ಷಾಂತರ ಹೃದ್ರೋಗಿಗಳಿಗೆ ಶುಭ ಸುದ್ದಿ: ದುಡ್ಡು ಬಾಚುವ ಆಸ್ಪತ್ರೆಗಳಿಗೆ ಆಘಾತ

ಹೊಸದಿಲ್ಲಿ, ಫೆ.14: ನ್ಯಾಷನಲ್ ಫಾರ್ಮಸ್ಯೂಟಿಕಲ್ ಪ್ರೈಸಿಂಗ್ ಅಥಾರಿಟಿ ಸೋಮವಾರ ಔಷಧ ಉಣಿಸುವಿಕೆ ನಳಿಕೆ (ಸ್ಟೆಂಟ್) ಬೆಲೆಯನ್ನು 30 ಸಾವಿರ ರೂಪಾಯಿಗೆ ನಿಗದಿಪಡಿಸಿದ್ದು, ಲೋಹದ ಸ್ಟೆಂಟ್ ಬೆಲೆಯನ್ನು 7500 ರೂಪಾಯಿಗಳಿಗೆ ಮಿತಿಗೊಳಿಸಿದೆ. ಈ ಹೊಸ ದರಗಳು ಫೆಬ್ರವರಿ 14ರಿಂದ ಜಾರಿಗೆ ಬಂದಿವೆ.
ಇದು ಲಕ್ಷಾಂತರ ಮಂದಿ ಹೃದ್ರೋಗಿಗಳಿಗೆ ವರದಾನವಾಗಿದ್ದು, ಕೊರೋನರಿ ಆಂಜಿಯೊಪ್ಲಾಸ್ಟಿ ಮೂಲಕ ಸ್ಟೆಂಟ್‌ಗಳನ್ನು ಅಳವಡಿಸಿಕೊಳ್ಳುವ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ. 2016ರಲ್ಲಿ ದೇಶದಲ್ಲಿ ಸುಮಾರು ಆರು ಲಕ್ಷ ಸ್ಟೆಂಟ್‌ಗಳನ್ನು ಬಳಸಲಾಗಿದೆ ಎಂದು ಅಂದಾಜು ಮಾಡಲಾಗಿತ್ತು.
ಡಿಇಎಸ್ ದರ ಹಾಲಿ 24 ಸಾವಿರ ರೂಪಾಯಿಗಳಿಂದ 1.5 ಲಕ್ಷ ರೂಪಾಯಿ ಇದ್ದು, ಬಯೊರೆಸೊರ್ಬೇಬಲ್ ಸ್ಟೆಂಟ್ ಬೆಲೆ 1.7 ಲಕ್ಷದಿಂದ 2 ಲಕ್ಷ ಇದೆ. ದೇಶದಲ್ಲಿ ಶೇ.95ರಷ್ಟು ಡಿಇಎಸ್ ಬಳಕೆಯಾಗುತ್ತಿದೆ. ಎನ್‌ಪಿಪಿಎಗೆ ಸ್ಟೆಂಟ್ ಕಂಪನಿಗಳು ಸಲ್ಲಿಸಿದ ಮಾಹಿತಿಯ ಪ್ರಕಾರ, ದೇಶೀಯವಾಗಿ ಡಿಇಎಸ್ ಉತ್ಪಾದನಾ ವೆಚ್ಚ ಸುಮಾರು 8000 ರೂಪಾಯಿ ಹಾಗೂ ಆಮದು ಮಾಡಿಕೊಂಡ ಸ್ಟೆಂಟ್‌ಗಳ ದರ 5 ಸಾವಿರ ರೂಪಾಯಿ. ರೋಗಿಗಳಿಗೆ ಉತ್ಫಾದನಾ ವೆಚ್ಚದ 10 ಪಟ್ಟು ದರ ವಿಧಿಸಲಾಗುತ್ತಿದೆ ಎನ್ನುವುದನ್ನೂ ಎನ್‌ಪಿಪಿಎಗೆ ಹೇಳಲಾಗಿತ್ತು.
ಆಸ್ಪತ್ರೆಗಳು ಶೇ.650ರಷ್ಟು ದರವನ್ನು ರೋಗಿಗಳಿಗೆ ವಿಧಿಸಿ, ಲಾಭ ಕೊಳ್ಳೆಹೊಡೆಯುತ್ತಿರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ದರ ಪರಿಷ್ಕರಿಸಲಾಗಿದೆ. ಇದನ್ನು ಆಸ್ಪತ್ರೆಗಳು ಕಟುವಾಗಿ ಟೀಕಿಸಿವೆ.
ಹೊಸ ಅಧಿಸೂಚನೆಯ ಅನ್ವಯ, ಆಸ್ಪತ್ರೆಗಳು ಸ್ಟೆಂಟ್‌ಗೆ ಪ್ರತ್ಯೇಕವಾಗಿ ಬಿಲ್ಲಿಂಗ್ ಮಾಡಬೇಕು. ಆಸ್ಪತ್ರೆಗಳು ಔಷಧ ಬೆಲೆ ನಿಯಂತ್ರಣ ಆದೇಶ (ಡಿಪಿಸಿಓ) ಪ್ಯಾರಾ 24 (4)ಕ್ಕೂ ಬದ್ಧವಾಗಿರಬೇಕಾಗುತ್ತದೆ. ಇದರ ಅನ್ವಯ "ಪ್ರತಿ ರೀಟೈಲರ್‌ಗಳು ಹಾಗೂ ಡೀಲರ್‌ಗಳು ದರಪಟ್ಟಿಯನ್ನು ಮತ್ತು ಪೂರಕ ಬೆಲೆಪಟ್ಟಿಯನ್ನು ಪ್ರದರ್ಶಿಸಬೇಕು. ಇದು ಎಲ್ಲರಿಗೂ ಕಾಣುವಂತಿದ್ದು, ಸಲಹೆ ಪಡೆಯಲು ಯಾರಾದರೂ ಬಯಸಿದರೆ ಆ ಬಗ್ಗೆ ಸಲಹೆಯನ್ನೂ ನೀಡುವುದು ಕಡ್ಡಾಯ"







