634 ವೈದ್ಯರ ಪದವಿ ರದ್ದುಪಡಿಸಿದ ಸುಪ್ರೀಂಕೋರ್ಟ್
ಮಧ್ಯಪ್ರದೇಶ ವ್ಯಾಪಂ ಹಗರಣ

ಹೊಸದಿಲ್ಲಿ, ಫೆ.14: ಬಹುಕೋಟಿ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿರುವ ಸುಪ್ರೀಂಕೋರ್ಟ್, 2008 ರಿಂದ 2012ರ ಅವಧಿಯಲ್ಲಿ ಅಕ್ರಮವಾಗಿ ವೈದ್ಯಕೀಯ ಪದವಿ ಪಡೆದ 634 ಮಂದಿಯ ವೈದ್ಯಕೀಯ ಪದವಿಯನ್ನು ರದ್ದುಪಡಿಸಿದೆ. ಅಕ್ರಮವಾಗಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ಎಲ್ಲರ ಪದವಿಗಳನ್ನು ರದ್ದುಪಡಿಸಲಾಗಿದೆ.
"ಅರ್ಜಿದಾರರ ಕ್ರಿಯೆಗಳು ಸ್ವೀಕಾರಾರ್ಹವಲ್ಲ ಹಾಗೂ ಕಾನೂನುಬಾಹಿರವಾದದ್ದು. ವೈಯಕ್ತಿಕ ಹಾಗೂ ಸಾಮಾಜಿಕ ಕಾರಣಗಳಿಗಾಗಿ ದೇಶದ ಚಾರಿತ್ರ್ಯವನ್ನು ಬಲಿಕೊಡಲಾಗದು" ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಹಾಗೂ ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್ ಹಾಗೂ ಅರುಣ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ, 83 ಪುಟಗಳ ತೀರ್ಪಿನಲ್ಲಿ ಹೇಳಿದೆ.
"ನಾವು ದೇಶವನ್ನು ನೈತಿಕತೆ ಮತ್ತು ಚಾರಿತ್ರ್ಯದ ಅಡಿಗಲ್ಲಿನ ಮೇಲೆ ನಿರ್ಮಿಸಲು ಹೊರಟಿದ್ದೇವೆ. ಇಲ್ಲಿ ಕೇವಲ ಕಾನೂನೇ ಅಂತಿಮ. ಈ ಹಿನ್ನೆಲೆಯಲ್ಲಿ ಅರ್ಜಿದಾರರ ಪ್ರತಿಪಾದನೆಯನ್ನು ಸ್ವೀಕರಿಸಲಾಗದು" ಎಂದು ಸ್ಪಷ್ಟಪಡಿಸಿದೆ. ಮೂವರೂ ನ್ಯಾಯಮೂರ್ತಿಗಳು ಈ ಸಂಬಂಧ ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ. ತಮ್ಮ ಶಿಕ್ಷಣಕ್ಕೆ ಮಾಡಿದ ಹಣಕಾಸು ವೆಚ್ಚದ ಮರುಪಾವತಿಗೆ ಸೂಚಿಸಬೇಕು ಎಂಬ ಅರ್ಜಿದಾರರ ವಾದವನ್ನೂ ಸುಪ್ರೀಂಕೋರ್ಟ್ ತಳ್ಳಿಹಾಕಿದೆ.





