ಬರ: ಹಾಲು ಉತ್ಪಾದನೆಯಲ್ಲಿ 1.28 ಲಕ್ಷ ಲೀ. ಇಳಿಕೆ

ಕೋಟ್ಟಯಂ,ಫೆ. 14: ಬಿಸಿಲಿನ ತಾಪಮಾನದಿಂದಾಗಿ ಹಾಲುಉತ್ಪಾದನೆಯಲ್ಲಿ ಇಳಿಕೆಯಾಗಿದೆ. ಸೆಕೆಯ ಕಾವೇರಿದಂತೆ ಕೇರಳದಲ್ಲಿ ಹಾಲಿನ ಉತ್ಪಾದನೆಯಲ್ಲಿ ಪ್ರತಿದಿನ 1,28,000 ಲೀಟರ್ ಇಳಿಕೆಯಾಗಿದೆ. ಹಾಲು ಉತ್ಪಾದನೆಯಲ್ಲಿ ಹೆಚ್ಚಳಕ್ಕೆ ಶ್ರಮಿಸುತ್ತಿರುವ ವೇಳೆ ಬೇಸಗೆ ಉತ್ಪಾದನೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಕ್ಷೀರ ಸಹಕಾರಿ ಸಂಘಗಳು ಪ್ರತಿದಿವಸ 16 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತಿತ್ತು. ಬೇಸಿಗೆಯ ಉಷ್ಣ ಅತಿಯಾಗುವುದರೊಂದಿಗೆ ಇದು 14,72,000 ಲೀಟರ್‌ಗೆ ಇಳಿಕೆಯಾಗಿದೆ ಎಂದು ಕ್ಷೀರಾಭಿವೃದ್ಧಿ ಇಲಾಖೆ ಹೇಳಿದೆ.
ಕ್ಷೀರ ಸಹಕಾರಿ ಸಂಘಗಳಿಗೆ ಹಾಲು ನೀಡದೆ ಸ್ಥಳೀಯವಾಗಿ ಮಾರುವವರು ಇದ್ದಾರೆ. ಇದನ್ನು ಕೂಡಾ ಲೆಕ್ಕಕ್ಕೆ ತೆಗೆದುಕೊಂಡರೂ ಹಾಲು ಉತ್ಪಾದನೆಯಲ್ಲಿ ಇಳಿಕೆಯೇ ಆಗಿದೆ ಎಂದು ಕ್ಷೀರಾಭಿವೃದ್ಧಿ ಇಲಾಖೆ ತಿಳಿಸಿದೆ.
ಮಲಬಾರ್ ವಲಯದಲ್ಲಿ ಭಾರಿ ಪ್ರಮಾಣದ ಇಳಿಕೆಯಾಗಿದೆ. ಎರ್ನಾಕುಲಂನಲ್ಲಿಯೂ ಇಳಿಕೆಯಾಗಿದೆ. ಆದರೆ ತಿರುವನಂತಪುರಂ ವಲಯದಲ್ಲಿ ಹಾಲುತ್ಪಾದನೆಯಲ್ಲಿ ಹೆಚ್ಚಳವಾಗಿದೆ. ತಿರುವನಂತಪುರಂನಲ್ಲಿ ಶೇ.4ರಷ್ಟು ಹಾಲುತ್ಪಾದನೆಯಲ್ಲಿ ಹೆಚ್ಚಳ ಆಗಿದ್ದು, ವಿವಿಧ ಯೋಜನೆಗಳನ್ನು ಜಾರಿಗೆ ತಂದು ಜಾಗೃತಿ ಮೂಡಿರುವುದು ಇದಕ್ಕೆ ಕಾರಣ. ಮುಂದಿನ ತಿಂಗಳಲ್ಲಿ ಇಲ್ಲಿಯೂ ಹಾಲು ಉತ್ಪಾದನೆಯಲ್ಲಿ ಇಳಿಕೆ ಆಗುವ ಸಾಧ್ಯತೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಬೇಸಿಗೆ ತೀವ್ರವಾದ್ದರಿಂದ ಜಾನುವಾರುಗಳಿಗೆ ಪೋಷಕಾಹಾರದ ಕೊರತೆ ಎದುರಾಗಿದೆ. ಇದು ಹಾಲು ಉತ್ಪಾದನೆಯನ್ನು ಬಾಧಿಸಿದೆ. ಹುಲ್ಲಿನ ಕೊರತೆ ಅವುಗಳಿಗೆ ಸರಿಯಾಗಿ ಮೇಲು ದೊರಕದ ಪರಿಸ್ಥಿತಿ, ಕುಡಿಯಲು ನೀರು ನೀರು ಸಿಗದಿರುವುದು ಇತ್ಯಾದಿ ಕಾರಣಗಳನ್ನು ಕ್ಷೀರೋತ್ಪಾದನೆಯ ಇಳಿಕೆಗೆ ಕಾರಣವೆಂದು ಅಧಿಕಾರಿಗಳು ಬೆಟ್ಟು ಮಾಡಿದ್ದಾರೆಂದು ವರದಿ ತಿಳಿಸಿದೆ.







