ಎನ್ನೆಂಸಿಯಲ್ಲಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ

ಸುಳ್ಯ,ಫೆ.14: ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ದಕ್ಷಿಣ ಭಾರತದಲ್ಲಿ ತೋಟಗಾರಿಕಾ ಬೆಳೆಗಳು: ಸಮಸ್ಯೆ ಮತ್ತು ಸವಾಲು ಎಂಬ ವಿಚಾರವಾಗಿ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ನಡೆಯಿತು.
ಕಾರ್ಯಕ್ರಮವನ್ನು ಪುತ್ತುರು ಎನ್.ಆರ್.ಸಿ.ಟಿ ನಿರ್ದೇಶಕ ಯಧುಕುಮಾರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದರವರು ವಹಿಸಿದ್ದರು. ಕೆ.ವಿ.ಜಿ ಕಾನೂನು ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ಪಡ್ಡಂಬೈಲು ವೆಂಕಟ್ರಮಣ ಗೌಡ, ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಜಗದೀಶ ಅಡ್ತಲೆ, ಪ್ರೋ. ಜವರೇ ಗೌಡ, ಕಾಲೇಜಿನ ಶಿಕ್ಷಕ ರಕ್ಷಕ ಸಮಿತಿ ಅಧ್ಯಕ್ಷ ಮಂಜುನಾಥ್, ಉಪನ್ಯಾಸಕರುಗಳಾದ ಪೂವಪ್ಪ ಕಣಿಯೂರು, ಕೃಷ್ಣಪ್ರಸಾದ್, ಗೋಕರ್ಣಾಥೇಶ್ವರ ಕಾಲೇಜಿನ ಅಸೋಸಿಯೇಟ್ ಪ್ರೋ. ಚಂದ್ರ ವೇದಿಕೆಯಲ್ಲ್ಲಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಗಿರಿಧರ ಗೌಡ, ಸ್ವಾಗತಿಸಿ, ಉಪನ್ಯಾಸಕಿ ವೀಣಾ ಕುಮಾರಿ ಅತಿಥಿಗಳ ಪರಿಚಯಿಸಿದರು.
ವಿಚಾರ ಸಂಕಿರಣದಲ್ಲಿ ಆಹ್ವಾನಿತ ಸಂಪನ್ಮೂಲ ವ್ಯಕ್ತಿಗಳಿಂದ ರಬ್ಬರ್ ತೋಟಗಾರಿಕೆ ವರ್ತಮಾನ ಮತ್ತು ಭವಿಷ್ಯ, ಅಡಿಕೆ ಬೆಳೆಯ ಪ್ರಸಕ್ತ ಸಮಸ್ಯೆಗಳು, ಕೊಕ್ಕೋ ಬೆಳೆಯ ಭವಿಷ್ಯದ ಕುರಿತಾದ ಗೋಷ್ಠಿಗಳು ನಡೆಯಿತು. ಹಾಗೆಯೇ ಕೃಷಿ ವಸ್ತು ಪ್ರದರ್ಶನವನ್ನು ನಡೆಸಲಾಯಿತು. ತೋಟಗಾರಿಕಾ ಕೃಷಿಗಳಾದ ತೆಂಗು, ಅಡಿಕೆ, ರಬ್ಬರ್, ಕೊಕ್ಕೋ, ಕಾಳುಮೆಣಸು ಮುಂತಾದ ಕೃಷಿ ನಿರ್ವಹಣಾ ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಮಾಹಿತಿ ನೀಡಲಾಯಿತು.





