ಒತ್ತುವರಿ ತೆರವಿಗೆ ಸುಗ್ರೀವಾಜ್ಞೆ ಹೊರಡಿಸಲು ದೊರೆಸ್ವಾಮಿ ಒತ್ತಾಯ

ಮಡಿಕೇರಿ ಫೆ.14:ಕರ್ನಾಟಕ ರಾಜ್ಯದಾದ್ಯಂತ ಉಳ್ಳವರು ಮಾಡಿಕೊಂಡಿರುವ ಸರಕಾರಿ ಭೂಮಿಯ ಒತ್ತುವರಿಯನ್ನು ತೆರವುಗೊಳಿಸಲು ಸರಕಾರ ಸುಗ್ರೀವಾಜ್ಞೆ ಹೊರಡಿಸಬೇಕೆಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಸ್. ದೊರೆಸ್ವಾಮಿ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯವ್ಯಾಪಿ ಇರುವ ನಿವೇಶನ ರಹಿತರಿಗೆ ಕನಿಷ್ಠ 3 ಏಕರೆ ಜಾಗವನ್ನು ಒದಗಿಸಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸರ್ಕಾರಿ ಭೂಮಿ ಒತ್ತುವರಿ ಕಾರ್ಯಪಡೆ ಗುರುತಿಸಿರುವಂತೆ ರಾಜ್ಯದಲ್ಲಿ 12 ಲಕ್ಷ ಎಕರೆಗೂ ಹೆಚ್ಚಿನ ಭೂಮಿ ಒತ್ತುವರಿಯಾಗಿದ್ದು, ಇದನ್ನು ತೆರವುಗೊಳಿಸಿ ಬಡವರಿಗೆ ಹಂಚಬೇಕೆಂದರು. ರಾಜ್ಯದ ಉಭಯ ಸದನಗಳು ಒಂದಾಗಿ ಭೂ ಕಬಳಿಕೆ ಪ್ರಕರಣಗಳ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ ಸ್ಥಾಪಿಸಿವೆ. ಆದರೆ, ಇದಕ್ಕೆ ಒತ್ತುವರಿ ಸರ್ಕಾರಿ ಜಾಗದ ಅಗತ್ಯ ದಾಖಲೆಗಳನ್ನು ಒದಗಿಸಿ ದೂರು ಸಲ್ಲಿಸಬೇಕಾದ ಆಯಾ ಜಿಲ್ಲಾಡಳಿತ, ಕಾರ್ಪೊರೇಷನ್, ಪಂಚಾಯ್ತಿಗಳು ಮೌನಕ್ಕೆ ಶರಣಾಗಿವೆ.
ಮೂರು ವರ್ಷಗಳ ಅವಧಿಯ ಈ ವಿಶೇಷ ನ್ಯಾಯಾಲಯ ಆರಂಭವಾಗಿ 10 ತಿಂಗಳು ಪೂರೈಸಿದ್ದರೂ ಭೂ ಕಬಳಿಕೆಯ ಪ್ರಕರಣಗಳನ್ನು ದಾಖಲಿಸುವ ಕೆಲಸ ಮಾತ್ರ ಆಯಾ ಜಿಲ್ಲಾಡಳಿತಗಳಿಂದ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವಿಶೇಷ ನ್ಯಾಯಾಲಯಕ್ಕೆ ಪ್ರಸ್ತುತ ಕೆಲವು ಭೂ ಒತ್ತುವರಿ ಪ್ರಕರಣಗಳ ಬಗ್ಗೆ ದೂರು ನೀಡಲಾಗಿದ್ದರು ಅದರಲ್ಲಿ ಒತ್ತುವರಿದಾರರ ಬಗ್ಗೆಯಾಗಲಿ, ಎಷ್ಟು ಪ್ರಮಾಣದ ಒತ್ತುವರಿಯಾಗಿದೆ ಎನ್ನುವ ಯಾವುದೇ ಮೂಲ ಮಾಹಿತಿಗಳಿಲ್ಲ. ಭೂ ಕಬಳಿಕೆಯ ಪ್ರಕರಣಗಳಿಗಾಗಿ ವಿಶೇಷ ನ್ಯಾಯಾಲಯ ಸ್ಥಾಪನೆಗಾಗಿ ನಾವು ಸಾಕಷ್ಟು ಕಷ್ಟ ಪಟ್ಟಿದ್ದೇವೆ. ಆದರೆ, ಪ್ರಸ್ತುತ ಇದನ್ನು ಉಪೇಕ್ಷೆ ಮಾಡಲಾಗುತ್ತಿದೆ. ಭೂ ಕಬಳಿಕೆಗೆ ಕಡಿವಾಣ ಹಾಕುವುದಕ್ಕೆ ಸಂಬಂಧಿಸಿದಂತೆ ಆಯಾ ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳು ಭೂ ಒತ್ತುವರಿ ಪ್ರಕರಣಗಳನ್ನು ಪತ್ತೆ ಹಚ್ಚಿ ದೂರು ದಾಖಲಿಸಲು ಮುಂದಾಗಬೇಕೆಂದು ದೊರೆಸ್ವಾಮಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿದ್ದ ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಅವರು ಮಾತನಾಡಿ ಶಾಸಕಾಂಗ ಮತ್ತು ಕಾರ್ಯಾಂಗ ‘ಕುದುರೆ’ಗಳಿದ್ದಂತೆ. ಇದನ್ನು ಓಡಿಸುವವರು ಸರ್ಕಾರದ ಸಚಿವರುಗಳಾಗಿದ್ದು, ಇವರಿಗೆ ಕುದುರೆ ಸವಾರಿಯೇ ಸರಿಯಾಗಿ ತಿಳಿದಿಲ್ಲ. ಇದರಿಂದ ಕುದುರೆ ಎತ್ತೆತ್ತಲೋ ಓಡುತ್ತದೆ. ಅದೇ ಸ್ಥಿತಿಯನ್ನು ಇಂದು ಕಾಣಲಾಗುತ್ತಿದೆ ವ್ಯಂಗ್ಯವಾಗಿ ನುಡಿದರು.







