ಚಲಿಸುವ ರೈಲಿನಿಂದ ಬಿದ್ದು ಇಂಜಿನಿಯರ್ ಸಾವು

ಶಿವಮೊಗ್ಗ, ಫೆ. 14: ರೈಲು ನಿಲುಗಡೆಗೊಳ್ಳುವುಕ್ಕೂ ಮುನ್ನವೇ ಬೋಗಿಯಿಂದ ಕೆಳಕ್ಕೆ ಇಳಿಯಲು ಮುಂದಾದ ಇಂಜಿನಿಯರ್‌ರೊಬ್ಬರು ಆಯತಪ್ಪಿ ಕೆಳಕ್ಕೆ ಬಿದ್ದು, ರೈಲಿನ ಚಕ್ರಗಳಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಕುಂಸಿ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆ ವರದಿಯಾಗಿದೆ. ಶಿವಮೊಗ್ಗ ನಗರದ ಶರಾವತಿ ನಗರ 5 ನೇ ಕ್ರಾಸ್ 8 ನೇ ಬ್ಲಾಕ್‌ನ ನಿವಾಸಿಯಾದ ಶಿವಕುಮಾರ್ (55) ಮೃತಪಟ್ಟವರೆಂದು ಗುರುತಿಸಲಾಗಿದೆ.
ಇವರು ನಗರದ ಪ್ರವಾಸಿ ಮಂದಿರದ ಸಮೀಪವಿರುವ ತುಂಗಾ ಮೇಲ್ದಂಡೆ ಯೋಜನಾ ಕಚೇರಿಯಲ್ಲಿ ತಾಂತ್ರಿಕ ಸಹಾಯಕ (ಟಿ.ಎ.) ರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಇದಕ್ಕೂ ಮುನ್ನ ಪಿಡಬ್ಲ್ಯೂಡಿ ವಿಶೇಷ ವಿಭಾಗದಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಶಿವಕುಮಾರ್‌ರವರು, ಕೆಲ ವರ್ಷಗಳ ಹಿಂದೆ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಮುಂಬಡ್ತಿ ಪಡೆದು ತುಂಗಾ ಮೇಲ್ದಂಡೆ ಕಚೇರಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದರು.
ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಎನ್. ಶೇಖರ್ ಮತ್ತವರ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣದಡಿ ಕೇಸ್ ದಾಖಲಾಗಿದೆ.





