ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದ ಹೆಡ್ ಕಾನ್ಸ್‌ಟೇಬಲ್!

ಶಿವಮೊಗ್ಗ, ಫೆ. 14: ಮಹಿಳೆಯೊಬ್ಬರಿಂದ ಮೂರು ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ಹೆಡ್ ಕಾನ್ಸ್‌ಟೇಬಲ್‌ವೊಬ್ಬರು ಭ್ರಷ್ಟಾಚಾರ ನಿಯಂತ್ರಣ ದಳ (ಎ.ಸಿ.ಬಿ.) ಬಲೆಗೆ ಬಿದ್ದಿರುವ ಘಟನೆ ಮಂಗಳವಾರ ನಗರದ ಲಕ್ಷ್ಮೀ ಟಾಕೀಸ್ ವೃತ್ತದ ಸಮೀಪ ನಡೆದಿದೆ.
ವಿನೋಬನಗರ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಮಹೇಶ್ವರಪ್ಪ (55) ಎ.ಸಿ.ಬಿ. ಬಲೆಗೆ ಬಿದ್ದವರೆಂದು ಗುರುತಿಸಲಾಗಿದೆ. ಇವರ ವಿರುದ್ದ ಎ.ಸಿ.ಬಿ. ಪೊಲೀಸರು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಡಿವೈಎಸ್‌ಪಿ ಎ. ಚಂದ್ರಪ್ಪ, ಇನ್ಸ್‌ಪೆಕ್ಟರ್ ರಮೇಶ್ ಮತ್ತವರ ಸಿಬ್ಬಂದಿಗಳು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಲಂಚಕ್ಕೆ ಡಿಮ್ಯಾಂಡ್: ದೂರುದಾರರಾದ ನವುಲೆಯ ನಿವಾಸಿಯೊಬ್ಬರು ನೆಗೋಷಿಯೆಬಲ್ ಇನ್ಸ್ಟುಮೆಂಟ್ ಕಾಯ್ದೆಯಡಿ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಆರೊಪಿಯ ವಿರುದ್ದ ವಾರೆಂಟ್ ಜಾರಿಗೊಳಿಸಿತ್ತು.
ಸಂಬಂಧಿಸಿದ ಆರೋಪಿಗೆ ನ್ಯಾಯಾಲಯ ಹೊರಡಿಸಿದ್ದ ವಾರೆಂಟ್ ಜಾರಿಗೊಳಿಸಲು ಮಹೇಶ್ವರಪ್ಪರವರು ದೂರುದಾರರ ಬಳಿ 5 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಅಂತಿಮವಾಗಿ 3 ಸಾವಿರ ರೂ. ನೀಡುವಂತೆ ಡಿಮ್ಯಾಂಡ್ ಮಾಡಿದ್ದರು.
ಈ ಕುರಿತಂತೆ ದೂರುದಾರ ಮಹಿಳೆಯು ಎ.ಸಿ.ಬಿ. ಪೊಲೀಸರ ಗಮನಕ್ಕೆ ತಂದಿದ್ದರು. ಎ.ಸಿ.ಬಿ. ಪೊಲೀಸರ ಸೂಚನೆಯಂತೆ ದೂರುದಾರರು ಲಕ್ಷ್ಮೀ ಟಾಕೀಸ್ ವೃತ್ತದ ಬಳಿ ಮಹೇಶ್ವರಪ್ಪರವರಿಗೆ 3 ಸಾವಿರ ರೂ. ನೀಡುವಾಗ ಎ.ಸಿ.ಬಿ. ಡಿವೈಎಸ್‌ಪಿ ನೇತೃತ್ವದ ತಂಡ ದಾಳಿ ನಡೆಸಿ ಲಂಚದ ಹಣದ ಸಮೇತ ಮಹೇಶ್ವರಪ್ಪರನ್ನು ವಶಕ್ಕೆ ಪಡೆದುಕೊಂಡಿದೆ.







