ಬೆಳೆನಷ್ಟ, ರೈತರ ಖಾತೆಗೆ ಹಣ ಜಮೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಬೆಂಗಳೂರು, ಫೆ.14: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲು ಬಿಮಾ ಯೋಜನೆಯಡಿ ಬೆಳೆ ನಷ್ಟ ಹೊಂದಿದ ರೈತರಿಗೆ ವಿಮೆ ಪರಿಹಾರವನ್ನು ಅವರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಮಂಗಳವಾರ ನಗರದ ಗೃಹ ಕಚೇರಿ ಕೃಷ್ಣದಲ್ಲಿ ಬೀದರ್ ಜಿಲ್ಲೆಯ ಬಸವರಾಜು ಎಂಬುವರ ರೈತನ ಖಾತೆಗೆ ಬೆಳೆ ವಿಮೆ ಜಮೆ ಮಾಡುವ ಮೂಲಕ ಮಹತ್ವಾಕಾಂಕ್ಷೆಯ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲು ಬಿಮಾ ಯೋಜನೆ ಅನುಷ್ಠಾನಗೊಂಡಿದೆ. ನಾಲ್ಕು ಎಕರೆ ಕೃಷಿ ಭೂಮಿಯಲ್ಲಿ ಸೋಯಾಬೀನ್ ಬೆಳೆ ಬೆಳೆದು ನಷ್ಟ ಅನುಭವಿಸಿದ್ದ ರೈತ ಬಸವರಾಜು ಅವರೊಂದಿಗೆ ದೂರವಾಣಿ ಮೂಲಕ ಮುಖ್ಯಮಂತ್ರಿಗಳು ಮಾತನಾಡಿ, ಅವರ ಖಾತೆಗೆ 19,715 ರೂ. ಜಮೆ ಮಾಡುವ ಮೂಲಕ ಸಂಕಷ್ಟದಲ್ಲಿದ್ದ ಅನ್ನದಾತನಿಗೆ ನೆರವಿನ ಹಸ್ತ ಚಾಚಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಮಾ ಯೋಜನೆಯಡಿ ಒಟ್ಟು 40 ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾಗೂ ಹವಾಮಾನ ಆಧಾರಿತ 16 ಇತರೆ ತೋಟಗಾರಿಕಾ ಬೆಳೆಗಳನ್ನು ಸೇರ್ಪಡೆ ಮಾಡಲಾಗಿದೆ. ಅದೇ ರೀತಿ, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಸಹಭಾಗಿತ್ವದಲ್ಲಿ ಸಾಂಘಿಕ ನಿರ್ದೇಶನಾಲಯ, ಕಂದಾಯ ಹಾಗೂ ಸಹಕಾರ ಇಲಾಖೆಗಳು ಕೈ ಜೋಡಿಸಲಿವೆ ಎಂದರು.
ರಾಷ್ಟ್ರೀಕೃತ, ಅಪೆಕ್ಸ್, ಡಿಸಿಸಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಈ ಯೋಜನೆ ವ್ಯಾಪ್ತಿಗೆ ಸೇರಲಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಯೋಜನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ತಾಕೀತು ಮಾಡಿದರು.
ಟಾಟಾ-ಎಐಜಿ, ಯುನಿವರ್ಸಲ್ ಸೋಂಪೋ ವಿಮಾ ಸಂಸ್ಥೆಗಳು ಬೆಳೆ ವಿಮೆ ಯೋಜನೆಯನ್ನು ಅನುಷ್ಠಾನಗೊಳಿಸಲಿವೆ. 2016ರ ಮುಂಗಾರು ಹಂಗಾಮಿಯಲ್ಲಿ ಬೆಳೆ ವಿಮೆ ಯೋಜನೆಯಡಿ 26,461 ಬೆಳೆವಾರು ವಿಮಾ ಘಟಕ ಹಾಗೂ ಹಿಂಗಾರು-ಬೇಸಿಗೆ ಬೆಳೆವಾರು 9,382 ಘಟಕಗಳನ್ನು ತೆರೆಯಲು ಸೂಚಿಸಿರುವುದಾಗಿ ವಿವರಿಸಿದರು.
ಈ ಯೋಜನೆಯಡಿ ಆಹಾರ ಮತ್ತು ಎಣ್ಣೆಕಾಳು ಬೆಳೆಗಳಿಗೆ ವಿಮಾ ಮೊತ್ತದ ಶೇ.2 ಹಾಗೂ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಶೇ.1.50 ವಿಮಾ ಕಂತನ್ನು ನಿಗದಿಪಡಿಸಲಾಗಿದೆ ಎಂದ ಅವರು, ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳಿಗೆ ಎಲ್ಲ ಹಂಗಾಮಿನಲ್ಲಿ ಶೇ.5ರಷ್ಟು ವಿಮಾ ಕಂತು ಹಾಗೂ ಪ್ರತಿ ಹೆಕ್ಟೇರ್ ಪ್ರದೇಶದ ಭತ್ತಕ್ಕೆ 82 ಸಾವಿರ, ಹುರುಳಿ 19 ಸಾವಿರ, ಆಲೂಗೆಡ್ಡೆ 1,34,000 ಹಾಗೂ 41 ಸಾವಿರ ರೂ. ನಿಗದಿ ಮಾಡಲಾಗಿದೆ ಎಂದು ಹೇಳಿದರು.
ವಿಮಾ ಸವಲತ್ತು ವಿತರಣೆ: ಹೋಬಳಿ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಬೆಲೆ ಕಟಾವು ಪ್ರಯೋಗಗಳಿಂದ ಬಂದಂತಹ ವಾಸ್ತವಿಕ ಇಳುವರಿ ಮಾಹಿತಿಯು ನಿಗದಿಪಡಿಸಲಾದ ಪ್ರಾರಂಭಿಕ ಇಳುವರಿಗಿಂತ ಕಡಿಮೆ ಇದ್ದರೆ, ಇಳುವರಿಯ ಶೇಕಡವಾರು ಕೊರತೆಗನುಗುಣವಾಗಿ ಬೆಲೆ ವಿಮಾ ನಷ್ಟ ಪರಿಹಾರವನ್ನು ಲೆಕ್ಕ ಹಾಕಲಾಗುತ್ತದೆ. ಅದೇ ರೀತಿ, ರೈತರ ಖಾತೆಗೆ ಆಧಾರ್ ಜೋಡಣೆ ಸಹ ಪ್ರಗತಿಯಲ್ಲಿದೆ ಎಂದರು.
ಬೀದರ್ ಜಿಲ್ಲೆಯಲ್ಲಿ 28,000 ಫಲಾನುಭವಿಗಳಿಗೆ 45 ಕೋಟಿ ರೂ. ಬೆಳೆ ವಿಮಾ ನಷ್ಟ ಪರಿಹಾರವನ್ನು ಈಗಾಗಲೇ ರೈತರ ಖಾತೆಗಳಿಗ ವರ್ಗಾಯಿಸಲಾಗಿದೆ. ಇದೇ ರೀತಿ ಕೋಲಾರ, ಕೊಪ್ಪಳ, ಕೊಡಗು, ಉಡುಪಿ, ಉತ್ತರ ಕನ್ನಡ ಬೆಳೆ ವಿಮಾ ನಷ್ಟ ಪರಿಹಾರ ಇತ್ಯರ್ಥಪಡಿಸುವ ಸಲುವಾಗಿ ಪರಿಶೀಲನೆ ಮುಗಿದಿದ್ದು, ಈ ತಿಂಗಳ ಅಂತ್ಯದೊಳಗೆ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.







