ಮಹಾದಾಯಿ ವಿವಾದ : ಪ್ರಧಾನಿ ಮಧ್ಯಸ್ಥಿಕೆಗೆ ಸಿಎಂ ಮನವಿ
ರೈತರ ಮೇಲಿನ ಕೇಸ್ ಹಿಂಪಡೆಯಲು ಕ್ರಮ: ಭರವಸೆ
ಬೆಂಗಳೂರು, ಫೆ. 14: ಮಹಾದಾಯಿ ಜಲ ವಿವಾದ ಇತ್ಯರ್ಥ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ಮುಖ್ಯಮಂತ್ರಿಗಳ ಸಭೆ ನಡೆಸಬೇಕು ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ
ಮಂಗಳವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಈಗಾಗಲೇ ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ನಾಲ್ಕೈದು ಬಾರಿ ಮನವಿ ಮಾಡಿದ್ದು, ಇದೀಗ ಅವರನ್ನು ಮತ್ತೊಮ್ಮೆ ಮನವಿ ಮಾಡುವೆ. ಅವರು ಶೀಘ್ರದಲ್ಲೆ ಮೂರು ರಾಜ್ಯಗಳ ಸಿಎಂಗಳ ಸಭೆ ನಡೆಸಿ ವಿವಾದ ಬಗೆಹರಿಸಬೇಕು ಎಂದು ಕೋರಿದರು.
ಗೋವಾ ಚುನಾವಣೆ ಬಳಿಕ ಮತ್ತೊಮ್ಮೆ ಪ್ರಧಾನಿ ಮೋದಿ ಅವರನ್ನು ಖುದ್ದು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸುವೆ ಎಂದ ಸಿದ್ದರಾಮಯ್ಯ, ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಹೋರಾಟ ನಡೆಸಿದ ರೈತರ ಮೇಲಿನ ಗಂಭೀರ ಸ್ವರೂಪದ ಮೊಕದ್ದಮೆ ಹೊರತುಪಡಿಸಿ ಉಳಿದ ಕೇಸುಗಳನ್ನು ಹಿಂಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಒಟ್ಟು 81ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 51 ಪ್ರಕರಣಗಳು ಸಚಿವ ಸಂಪುಟ ಉಪ ಸಮಿತಿ ಪರಿಶೀಲಿಸಿ ಸಂಪುಟಕ್ಕೆ ಶಿಫಾರಸು ಮಾಡಲಿದೆ. ಆ ಬಳಿಕ ರೈತರ ಮೇಲಿನ ಕೇಸುಗಳನ್ನು ಹಿಂಪಡೆಯುವ ಸಂಬಂಧ ತೀರ್ಮಾನಿಸಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.