‘ಬದುಕಿನ ಸುಖ-ದು:ಖ ಸಮಾನವಾಗಿ ಸ್ವೀಕರಿಸಿ’
ದತ್ತಿನಿಧಿ ಕಾರ್ಯಕ್ರಮ

ಮಂಗಳೂರು, ಫೆ.14: ಕರಾವಳಿ ಲೇಖಕಿಯರ- ವಾಚಕಿಯರ ಸಂಘ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ಸಂಘದ ಸಹಯೋಗದಲ್ಲಿ ಪದ್ಮಾ ಶೆಣೈ, ಆರೂರು ಲಕ್ಷ್ಮೆ ರಾವ್, ಲಲಿತಾ ಆರ್ ರೈ ಹಾಗೂ ಎ.ಪಿ. ಮಾಲತಿ ದತ್ತಿನಿಧಿ ಕಾರ್ಯಕ್ರಮ ಮಂಗಳವಾರ ವಿವಿ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಿತು.
ಲೇಖಕಿ ಪದ್ಮಾ ಶೆಣೈ ಮಾತನಾಡಿ, ಬದುಕು ಒಂದು ಅದ್ಭುತ ಕಲೆಯಾಗಿದೆ. ಅದರಲ್ಲಿ ಸುಖ ದು:ಖ ಎರಡೂ ಸೇರಿದೆ. ಅವೆರಡನ್ನೂ ಸಮತೂಗಿಸಿಕೊಂಡು ಬಾಳುವ ಕಲೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಎಲ್ಲ ಚಟುವಟಿಕೆಗಳಲ್ಲೂ ಸ್ಪರ್ಧಿಸುವ ಮನೋಭಾವ ಇರಬೇಕು ಎಂದರು.
ದ.ಕ. ಹಿತ ಸಂಪನ್ಮೂಲ ಘಟಕದ ಮಂಜುಳಾ ಸುನಿಲ್ ಅತಿಥಿಯಾಗಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಎ. ಉದಯ್ ಕುಮಾರ್ ಇರ್ವತ್ತೂರು ಅಧ್ಯಕ್ಷತೆ ವಹಿಸಿದ್ದರು. ದತ್ತಿನಿಧಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ಪ್ರಬಂಧ ಸ್ಪಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿವಿ ಕಾಲೇಜಿನ ಕನ್ನಡ ಸಂಘದ ನಿರ್ದೇಶಕಿ ಡಾ.ರತ್ನಾವತಿ ಟಿ ಸ್ವಾಗತಿಸಿದರು. ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಅಧ್ಯಕ್ಷೆ ಡಾ. ಶೈಲಾ ಯು. ಪ್ರಾಸ್ತಾವಿಕ ಮಾತುಗಳನ್ನಾಡಿದರು.





