ಪನ್ನೀರ್‌ಸೆಲ್ವಂ ಸಹಿತ 10 ಎಡಿಎಂಕೆ ಮುಖಂಡರ ಉಚ್ಚಾಟನೆ

ಚೆನ್ನೈ,ಫೆ.14: ತನ್ನ ವಿರುದ್ಧ ಬಂಡೆದ್ದಿರುವ ಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ ಸೇರಿದಂತೆ ಎಡಿಎಂಕೆ ಪಕ್ಷದ 20 ಮಂದಿ ಮುಖಂಡರನ್ನು, ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರು ಮಂಗಳವಾರ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದ್ದಾರೆ.
ಆದಾಯ ಮೀರಿದ ಆಸ್ತಿಗಳಿಕೆ ಪ್ರಕರಣದಲ್ಲಿ ತನ್ನನ್ನು ಸುಪ್ರೀಂಕೋರ್ಟ್ ದೋಷಿಯೆಂದು ತೀರ್ಪು ನೀಡಿದ ಕೆಲವೇ ತಾಸುಗಳಲ್ಲಿ ಶಶಿಕಲಾ ಈ ಕ್ರಮವನ್ನು ಕೈಗೊಂಡಿದ್ದಾರೆ.
‘‘ ಪಕ್ಷದ ತತ್ವ ಹಾಗೂ ಸಿದ್ಧಾಂತಗಳಿಗೆ ವಿರುದ್ಧವಾಗಿ ಕಾರ್ಯಾಚರಿಸಿದ ಈ ಸದಸ್ಯರನ್ನು ಅವರ ಪಕ್ಷವಿರೋಧಿ ಚಟುವಟಿಕೆಗಳಿಗಾಗಿ ಹಾಗೂ ಪಕ್ಷದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸಿದ್ದಕ್ಕಾಗಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ’’ ಎಂದು ಶಶಿಕಲಾ ಅವರು ಸಹಿಹಾಕಿರುವ ಪಕ್ಷದ ಅಧಿಕೃತ ಹೇಳಿಕೆಯು ತಿಳಿಸಿದೆ.
ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ, ಶಾಲಾ ಶಿಕ್ಷಣ ಸಚಿವ ಮಾ ಫೊಯ್ ಪಾಂಡ್ಯರಾಜನ್, ಎಡಿಎಂಕೆ ವಕ್ತಾರ ಪೊನ್ನಯ್ಯನ್, ಮಾಜಿ ಸಚಿವರಾದ ನಾಥಮ್ ಆರ್.ವಿಶ್ವನಾಥನ್, ಕೆ.ಪಿ. ಮುನುಸ್ವಾಮಿ, ರಾಜೇಂದ್ರ ಬಾಲಾಜದಿ ಹಾಗೂ ಪಿ. ಮೋಹನ್ ಉಚ್ಚಾಟಿತ ನಾಯಕರಲ್ಲಿ ಸೇರಿದ್ದಾರೆ.
ಇದರ ಜೊತೆಗೆ ಮಾಜಿ ಶಾಸಕರಾದ ಕೆ. ಥಾವಸಿ, ಕೆ.ಎ. ಜಯಪಾಲ್, ಎಸ್.ಕೆ.ಸೆಲ್ವಂ, ವಿ.ನೀಲಕಂಡನ್ ಹಾಗೂ ಕೆ. ಅಯ್ಯಪ್ಪನ ಕೂಡಾ ಉಚ್ಚಾಟಿಸಲ್ಪಟ್ಟಿದ್ದಾರೆ. ಆದಾಗ್ಯೂ ಪನ್ನೀರ್‌ಸೆಲ್ವಂ ಅವರನ್ನು ಬೆಂಬಲಿಸುತ್ತಿರುವ ಸಂಸದರು ಹಾಗೂ ಶಾಸಕರ ವಿರುದ್ಧ ಶಶಿಕಲಾ ಯಾವುದೇ ಶಿಸ್ತುಕ್ರಮವನ್ನು ಕೈಗೊಂಡಿಲ್ಲ.
ಈ ಮಧ್ಯೆ ಎಡಿಎಂಕೆ ಶಾಸಕಾಂಗ ಪಕ್ಷದ ನಾಯಕರಾಗಿ ಕೆ. ಪಳನಿಸ್ವಾಮಿ ಅವರನ್ನು ನೇಮಕವನ್ನು ಹಂಗಾಮಿ ಓ.ಪನ್ನೀರ್‌ಸೆಲ್ವಂ ನೇತೃತ್ವದ ಬಣವು ತಿರಸ್ಕರಿಸಿದೆ. ಯಾರನ್ನು ಕೂಡಾ ಆಯ್ಕೆ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಪನ್ನೀರ್‌ಸೆಲ್ವಂ ಅವರ ಪ್ರಬಲ ಬೆಂಬಲಿಗರಾದ ಶಿಕ್ಷಣ ಸಚಿವ ಪಾಂಡ್ಯರಾಜನ್ ಗುಡುಗಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನ ಕೆಲವೇ ನಿಮಿಷಗಳಲ್ಲಿ ಶಶಿಕಲಾರನ್ನು ಸಮರ್ಥಿಸಿರುವ ಎಡಿಎಂಕೆ ನಾಯಕತ್ವವು, ದಿವಂಗತ ಜಯಲಲಿತಾ ಅವರ ಮೇಲಿನ ಹೊರೆಯನ್ನು ಶಶಿಕಲಾ ಸದಾಕಾಲ ಹೊತ್ತುಕೊಂಡೇ ಸಾಗಿದ್ದರು. ಈಗಲೂ ಅದನ್ನೇ ಮಾಡುತ್ತಿದ್ದಾರೆಂದು ಪಕ್ಷದ ಅಧಿಕೃತ ಟ್ವೀಟರ್ ಹೇಳಿಕೆಯೊಂದು ತಿಳಿಸಿದೆ.







