ಮಂಗಳೂರು : ಪತ್ನಿಯ ಕೊಲೆ - ಅಪರಾಧಿಗೆ ಜೀವಾವಧಿ ಶಿಕ್ಷೆ

ಮಂಗಳೂರು, ಫೆ. 14: ಬಾಣಂತಿ ಪತ್ನಿಯನ್ನು ಕಡಿದು ಕೊಲೆಗೈದ ಪತಿಗೆ ಮಂಗಳೂರು ಒಂದನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದೆ.
ಎಡಪದವು ಕುವೆದಪಾಡಿ ನಿವಾಸಿ ಜಯಂತ್ (33) ಶಿಕ್ಷೆಗೊಳಗಾದ ಅಪರಾಧಿ. ಈತ ಆಸ್ಪತ್ರೆಗೆ ದಾಖಲಾಗಿದ್ದ ತನ್ನ ಬಾಣಂತಿ ಪತ್ನಿಯನ್ನು ಕೊಲೆಗೈದು, ಎರಡು ದಿನದ ಹಸುಗೂಸಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ. ಬಳಿಕ ಅಲ್ಲಿದ್ದ ಸಾರ್ವಜನಿಕರಿಗೆ ಬೆದರಿಕೆಯೊಡ್ಡಿದ್ದ.
ಕೊಲೆ ಪ್ರಕರಣಕ್ಕೆ ಜೀವಾವಧಿ ಶಿಕ್ಷೆ ಮತ್ತು 5 ಸಾವಿರ ರೂ.ದಂಡ. ದಂಡ ತೆರಲು ತಪ್ಪಿದಲ್ಲಿ 6 ತಿಂಗಳು ಸಜೆ, ಕೊಲೆ ಯತ್ನ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಮತ್ತು 5 ಸಾವಿರ ರೂ.ದಂಡ. ದಂಡ ತೆರಲು ತಪ್ಪಿದಲ್ಲಿ 6 ತಿಂಗಳು ಸಜೆ, ತೀವ್ರ ಸ್ವರೂಪದ ಗಾಯ ಪ್ರಕರಣದಲ್ಲಿ 7 ವರ್ಷ ಕಠಿಣ ಸಜೆ, 3 ಸಾವಿರ ರೂ.ದಂಡ. ದಂಡ ತೆರಲು ತಪ್ಪಿದರೆ ಮತ್ತೆ 3 ತಿಂಗಳ ಸಜೆ, ಜೀವ ಬೆದರಿಕೆ ಪ್ರಕರಣದಲ್ಲಿ 1 ವರ್ಷ ಕಠಿಣ ಸಜೆ,3 ಸಾವಿರ ರೂ.ದಂಡ. ದಂಡ ತೆರಲು ತಪ್ಪಿದರೆ 3 ತಿಂಗಳು ಸಜೆ. ಅಲ್ಲದೆ ಪುತ್ರನಿಗೆ ಪರಿಹಾರ ಒದಗಿಸಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸು ಮಾಡಿ ನ್ಯಾಯಾಧೀಶ ಸಿ.ಎಂ.ಜೋಶಿ ತೀರ್ಪು ನೀಡಿದ್ದಾರೆ.
ಪ್ರಕರಣದ ಹಿನ್ನಲೆ: ಅಪರಾಧಿ ಜಯಂತ್ ತನ್ನ ಪತ್ನಿ ಬಡಗಮಿಜಾರು ಗ್ರಾಮದ ಕೊಪ್ಪದಕುಮೇರು ನಿವಾಸಿ ಜಯಂತಿ (24) ಎಂಬಾಕೆಯನ್ನು ಮೂಡುಬಿದಿರೆ ಸಮುದಾಯ ಆಸ್ಪತೆಯಲ್ಲಿ ಹೆರಿಗೆಯಾಗಿ ದಾಖಲಾಗಿದ್ದರು. 2012 ಜೂ.20 ರಂದು ರಾತ್ರಿ 11 ಗಂಟೆಗೆ ಆಗಮಿಸಿದ ಜಯಂತ್ ಆಕೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದ. ಜಯಂತಿ ಬೆಡ್ ಮೇಲಿದ್ದ ಎರಡು ದಿನದ ಗಂಡು ಮಗುವನ್ನು ಕತ್ತಿಯಿಂದ ಎತ್ತಿ ಬಿಸಾಡಿ ಕೊಲೆಗೆ ಯತ್ನಿಸಿದ್ದ. ತಡೆಯಲು ಬಂದಿದ್ದ ಆಸ್ಪತ್ರೆಯ ಸಿಬ್ಬಂದಿಗೆ ಜೀವ ಬೆದರಿಕೆ ಒಡ್ಡಿದ್ದ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಗು ಮಾರಣಾಂತಿಕವಾಗಿ ಗಾಯಗೊಂಡು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.
ಎಲ್ಲ ಆರೋಪ ಸಾಬೀತು: ಜಯಂತ್ ವಿರುದ್ಧ ಪತ್ನಿಯ ಕೊಲೆ, ಮಗುವಿಗೆ ಗಂಭೀರ ಗಾಯ,ಕೊಲೆ ಯತ್ನ, ಜೀವಬೆದರಿಕೆ ಪ್ರಕರಣ ದಾಖಲಾಗಿತ್ತು. ಈ ಎಲ್ಲ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಸರಕಾರಿ ಅಭಿಯೋಜಕ ರಾಜು ಪೂಜಾರಿ ಬನ್ನಾಡಿ ಅವರು ಒಟ್ಟು 39 ಸಾಕ್ಷಿ ವಿಚಾರಣೆ ನಡೆಸಿದ್ದರು. ಪ್ರಾರಂಭಿಕ ಹಂತದಲ್ಲಿ ಹಿರಿಯ ಸರಕಾರಿ ಅಭಿಯೋಜಕ ಪುಷ್ಪರಾಜ ಅಡ್ಯಂತಾಯ ಹಾಗೂ ಮಂಜುನಾಥ ಭಟ್ ಪನ್ನೆ ವಿಚಾರಣೆ ನಡೆಸಿದ್ದರು.







