ಉಡುಪಿ : ಟೋಲ್ ಶುಲ್ಕ ನಿಗದಿಯಲ್ಲಿ ನನ್ನ ಪಾತ್ರವಿಲ್ಲ - ಜಿಲ್ಲಾಧಿಕಾರಿ ಸ್ಪಷ್ಟನೆ

ಮಣಿಪಾಲ, ಫೆ.14: ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಿಸಿರುವ ಹೆಜಮಾಡಿ ಹಾಗೂ ಸಾಸ್ತಾನ ಗುಂಡ್ಮಿ ಟೋಲ್‌ಗೇಟ್‌ನಲ್ಲಿ ಗುತ್ತಿಗೆದಾರರಾದ ನವಯುಗ ಕಂಪೆನಿ ಫೆ.9ರಿಂದ ಟೋಲ್ ಶುಲ್ಕ ಪಡೆಯುವಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ. ತಮ್ಮ ಮೇಲಾಧಿಕಾರಿಗಳ ಆದೇಶದಂತೆ ಟೋಲ್‌ಗೇಟ್‌ಗೆ ಪೊಲೀಸ್ ಭದ್ರತೆ ಒದಗಿಸುವಂತೆ ಮಾತ್ರ ತಾವು ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.
ಇಂದು ಸಂಜೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಅವರು ಈ ವಿಷಯ ತಿಳಿಸಿದರು. ಟೋಲ್ ಸಂಗ್ರಹಕ್ಕೆ ಸಂಬಂಧಿಸಿ ದಂತೆ ಕಳೆದ ಜ.28ರ ಬಳಿಕದ ಸತತ ಬೆಳವಣಿಗೆಗಳ ಕುರಿತು ಅವರು ಪತ್ರಕರ್ತರಿಗೆ ಮಾಹಿತಿಗಳನ್ನು ನೀಡಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಚತುಷ್ಪಥ ಕಾಮಗಾರಿಯ ಸಂದರ್ಭದಲ್ಲಿ ನಿರ್ಮಾಣಗೊಂಡಿರುವ ಟೋಲ್‌ಪ್ಲಾಜಾಗಳಲ್ಲಿ ಯಾವಾಗ ಮತ್ತು ಎಷ್ಟು ಟೋಲ್ ಶುಲ್ಕವನ್ನು ಸಂಗ್ರಹಿಸಬೇಕು ಎಂಬುದನ್ನು ನಿರ್ಧರಿಸುವುದು ಕೇಂದ್ರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾತ್ರ. ಎನ್‌ಎಚ್‌ಎಯಿಂದ ಹಸಿರು ನಿಶಾನೆ ದೊರಕಿದ ಬಳಿಕಷ್ಟೇ ಗುತ್ತಿಗೆದಾರ ಕಂಪೆನಿ (ನವಯುಗ) ಟೋಲ್ ಶುಲ್ಕ ಸಂಗ್ರಹಿಸಬಹುದು.
ಅದರಂತೆ ಕಳೆದ ಜ.30ರಂದೇ ಟೋಲ್ ಸಂಗ್ರಹಕ್ಕೆ ಅನುಕೂಲವಾಗುವಂತೆ ಟೋಲ್‌ಗೇಟ್‌ಗಳಲ್ಲಿ ಪೊಲೀಸ್ ರಕ್ಷಣೆ ಒದಗಿಸುವಂತೆ ನವಯುಗ ಮತ್ತು ರಾ.ಹೆದ್ದಾರಿಯ ಅಧಿಕಾರಿಗಳು ತಮಗೆ ಮನವಿ ಮಾಡಿದ್ದರು. ಶುಲ್ಕ ಸಂಗ್ರಹಕ್ಕೆ ಅವಕಾಶ ಮಾಡಿಕೊಡದಿದ್ದರೆ, ಒಪ್ಪಂದದಂತೆ ತಮಗಾಗುವ ನಷ್ಟವನ್ನು ತುಂಬಿಕೊಡುವಂತೆ ರಾಜ್ಯ ಸರಕಾರದ ವಿರುದ್ಧ ಮೊಕದ್ದಮೆ ಹೂಡುವುದಾಗಿ ಕಂಪೆನಿ ಅಧಿಕಾರಿಗಳು ಎಚ್ಚರಿಸಿದ್ದರು ಎಂದರು.
ಜ.28ರಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಜಿಪಂ, ಗ್ರಾಪಂ ಸದಸ್ಯರ ನಿಯೋಗವೊಂದು ತಮ್ಮನ್ನು ಭೇಟಿಯಾಗಿ ಸಾಸ್ತಾನ ಟೋಲ್‌ಗೇಟ್ ಬಳಿ ಸರ್ವಿಸ್ ರಸ್ತೆ ಹಾಗೂ ಇತರ ಕಾಮಗಾರಿಗಳು ಪೂರ್ಣಗೊಳ್ಳದೇ ಟೋಲ್ ಸಂಗ್ರಹ ಮಾಡಬಾರದು ಹಾಗೂ ಐದು ಕಿ.ಮೀ. ಪರಿಸರದ ಖಾಸಗಿ ವಾಹನಗಳಿಗೆ ಶುಲ್ಕದಿಂದ ರಿಯಾಯಿತಿ ನೀಡಬೇಕು ಎಂ ಮನವಿ ಅರ್ಪಿಸಿದ್ದರು.
ಸಾರ್ವಜನಿಕರ ಈ ಬೇಡಿಕೆಯನ್ನು ತಾವು ನವಯುಗ ಕಂಪೆನಿಗೆ ಪತ್ರ ಬರೆದು ತಿಳಿಸಿದ್ದಾಗಿ ಹೇಳಿದ ಜಿಲ್ಲಾಧಿಕಾರಿಗಳು, ತಾವು ಮುಖ್ಯಮಂತ್ರಿ ಕರೆದ ಸಭೆಯಲ್ಲಿ ಬಾಗವಹಿಸಲು ಬೆಂಗಳೂರಿನಲ್ಲಿದ್ದಾಗ ಕಂಪೆನಿ ತಮ್ಮನ್ನು ಸಂಪರ್ಕಿಸಿ ಹೆದ್ದಾರಿ ಪ್ರಾಧಿಕಾರದಿಂದ ಹಸಿರು ನಿಶಾನೆ ಸಿಕ್ಕಿರುವುದನ್ನು ತಿಳಿಸಿದ್ದಾರೆ. ಜನರ ಮನವಿ ಕುರಿತು ಕೇಳಿದಾಗ ಟೋಲ್‌ಗೇಟ್‌ನ 20ಕಿ.ಮೀ. ವ್ಯಾಪ್ತಿಯ ಖಾಸಗಿ ವಾಹನಗಳಿಗೆ ಸಂಪೂರ್ಣ ವಿನಾಯಿತಿ ನೀಡಲು ನಿರಾಕರಿಸಿದರಲ್ಲದೇ ಮಾಸಿಕ 235 ರೂ.ಗಳ ರಿಯಾಯಿತಿ ದರದ ಶುಲ್ಕ ವಿಧಿಸಲು ಒಪ್ಪಿಕೊಂಡರು ಎಂದರು.
ಅಲ್ಲದೇ ಫೆ.1ರಿಂದ ಜನರಿಂದ ಶುಲ್ಕ ಸಂಗ್ರಹಿಸಲು ತಮಗೆ ಟೋಲ್‌ಗೇಟ್‌ಗೆ ಪೊಲೀಸರ ಭದ್ರತೆ ಒದಗಿಸುವಂತೆ ಲಿಖಿತ ಮನವಿ ಮಾಡಿಕೊಂಡರು ಎಂದರು. ಫೆ.3ರಂದು ಸಂಸದೆ ಶೋಭಾ ಕರಂದ್ಲಾಜೆ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆದು ಶೇ.100 ಕಾಮಗಾರಿ ಮುಗಿಯದೇ ಶುಲ್ಕ ಸಂಗ್ರಹಿಸದಂತೆ ಮನವಿ ಮಾಡಿಕೊಂಡರು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ನೇತೃತ್ವದಲ್ಲಿ ಫೆ.4ರಂದು ಟೋಲ್‌ಸಂಗ್ರಹ ಸಂಬಂಧ ಜನಪ್ರತಿನಿಧಿಗಳು, ಹೋರಾಟಗಾರರ ಸಭೆ ನಡೆದು ಅದರಲ್ಲಿ ನಡೆದ ಕಾಮಗಾರಿಯ ಕುರಿತು ವರದಿ ನೀಡಲು ಸ್ಥಳೀಯ ಇಂಜಿನಿಯರ್‌ಗಳ ತಂಡ ರಚಿಸಿ ನಾಲ್ಕು ದಿನಗಳ ಕಾಲಾವಕಾಶ ನೀಡಲಾಯಿತು ಎಂದು ಟಿ.ವೆಂಕಟೇಶ್ ತಿಳಿಸಿದರು.
ಫೆ.8ಕ್ಕೆ ಈ ತಂಡ ವರದಿ ನೀಡಿದ್ದು, ಜಿಲ್ಲೆಯ ಒಟ್ಟು 65.15 ಕಿ.ಮೀ. ಉದ್ದದ ರಾ.ಹೆದ್ದಾರಿಯಲ್ಲಿ ಕೇವಲ 7ಕಿ.ಮೀ. ಉದ್ದದ ಕಾಮಗಾರಿ ಮಾತ್ರ ಬಾಕಿ ಉಳಿದಿದ್ದು, 58.15ಕಿ.ಮಿ. ರಸ್ತೆ ಕಾಮಗಾರಿ ಸಂಪೂರ್ಣಗೊಂಡಿದೆ ಎಂದು ವರದಿ ತಿಳಿಸಿತ್ತು. ಕುಂದಾಪುರ, ಉಡುಪಿ ಕರಾವಳಿ ಬೈಪಾಸ್ ಹಾಗೂ ಪಡುಬಿದ್ರಿಗಳಲ್ಲಿ ಮಾತ್ರ ಕಾಮಗಾರಿ ಅಪೂರ್ಣವಾಗಿದೆ. ಒಟ್ಟು 30.90 ಕಿ.ಮೀ. ಸರ್ವಿಸ್ ರಸ್ತೆಯಲ್ಲಿ 14.50ಕಿ.ಮೀ. ರಸ್ತೆ ಆಗಿದೆ ಎಂದು ಅವರು ಹೇಳಿದೆ ಎಂದರು.
ಈ ಹಂತದಲ್ಲಿ ಟೋಲಗೇಟ್‌ಗೆ ಪೊಲೀಸ್ ರಕ್ಷಣೆಗೆ ವ್ಯವಸ್ಥೆ ಮಾಡಿ ಇಲ್ಲದಿದ್ದರೆ ಕಂಪೆನಿಗೆ ನಷ್ಟವನ್ನು ತುಂಬುವುದಕ್ಕೆ ನೀವೆ ಜವಾಬ್ದಾರಿ ಎಂದು ಬೆಂಗಳೂರಿನ ತಮ್ಮ ಮೇಲಾಧಿಕಾರಿಗಳಿಂದ ಬಂದ ಆದೇಶದಂತೆ ತಾವು ಟೋಲ್‌ಗೇಟ್‌ಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದಾಗಿ ಹೇಳಿದ ವೆಂಕಟೇಶ್, ಅದೇ ದಿನ ಮಧ್ಯರಾತ್ರಿಯಿಂದ ಕಂಪೆನಿ ಟೋಲ್ ಶುಲ್ಕ ಸಂಗ್ರಹ ಆರಂಭಿಸಿತು ಎಂದರು.
ಆದುದರಿಂದ ಟೋಲ್ ಸಂಗ್ರಹ ಆದೇಶ ನೀಡುವಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ. ತಪ್ಪು ಮಾಹಿತಿಯಿಂದ ಹೋರಾಟಗಾರರು ತಮ್ಮ ವಿರುದ್ಧ ವೃಥಾ ಆರೋಪ ಮಾಡುತಿದ್ದಾರೆ. ರಾ.ಹೆದ್ದಾರಿ ಯೋಜನೆಯಲ್ಲಿ ರಾಜ್ಯ ಸರಕಾರವೂ ಪಾಲುದಾರರಾಗಿರುವುದರಿಂದ ಟೋಲ್‌ಗೇಟ್‌ಗಳಿಗೆ ರಕ್ಷಣೆ ನೀಡುವ ಕೆಲಸ ರಾಜ್ಯದ್ದು ಎಂದರು. ಶುಲ್ಕವನ್ನು ಸಂಗ್ರಹಿಸಲು ಅಥವಾ ಅದನ್ನು ನಿಲ್ಲಿಸುವಂತೆ ಹೇಳಲು ಜಿಲ್ಲಾಡಳಿತಕ್ಕೆ ಅಧಿಕಾರವಿಲ್ಲ ಎಂದರು.
ಈ ವಿಷಯದ ಕುರಿತಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಭೆಯೊಂದು ಬೆಂಗಳೂರಿನಲ್ಲಿ ಶೀಘ್ರದಲ್ಲೇ ನಡೆಯಲಿದೆ ಎಂದು ಟಿ.ವೆಂಕಟೇಶ್ ತಿಳಿಸಿದರು. ಎಡಿಸಿ ಅನುರಾಧ ಉಪಸ್ಥಿತರಿದ್ದರು.







