ಒಂಟಿ ಸಲಗ ತುಳಿತಕ್ಕೆ ಓರ್ವ ಬಲಿ
ತುಮಕೂರು, ಫೆ.14: ಜಿಲ್ಲೆಯಲ್ಲಿ ಆನೆ ದಾಳಿ ಮುಂದುವರಿದಿದ್ದು, ಒಂದು ತಿಂಗಳ ಹಿಂದೆ ಇಬ್ಬರು ರೈತರನ್ನು ಬಲಿ ಪಡೆದ ಘಟನೆ ಮಾಸುವ ಮುನ್ನವೇ ಈಗ ಮತ್ತೊಂದು ಜೀವ ಬಲಿಯಾಗಿದೆ.
ಜಿಲ್ಲೆಯ ಗುಬ್ಬಿ ತಾಲೂಕು ನಿಟ್ಟೂರು ಹೋಬಳಿ ಹುದ್ದೆಹೊಸಕೆರೆ ಗ್ರಾಮದಲ್ಲಿ ಮುಂಜಾನೆ ಒಂಟಿ ಸಲಗ ತುಳಿತಕ್ಕೆ ಓರ್ವ ರೈತ ಬಲಿಯಾಗಿದ್ದಾನೆ. ಕಳೆದ ಮೂರು ದಿನಗಳಿಂದ ಗುಬ್ಬಿ ತಾಲೂಕಿನ ಎಂ.ಎನ್. ಕೋಟೆ, ಹಾಗಲವಾಡಿ ಮತ್ತಿತರ ಕಡೆಗಳಲ್ಲಿ ಸಂಚರಿಸುತ್ತಿರುವ ಒಂಟಿ ಸಲಗ, ಮಂಗಳವಾರ ಉದ್ದೆಹೊಸಕೆರೆ ಬಂದು ಕೃಷಿ ಕೆಲಸದಲ್ಲಿ ತೊಡಗಿದ್ದ ರಂಗಪ್ಪ (60) ಎಂಬ ರೈತನನ್ನು ತುಳಿದು ಸಾಯಿಸಿದೆ. ಸಾವನದುರ್ಗ ಆರಣ್ಯ ಪ್ರದೇಶದಿಂದ ತಾಲೂಕಿನ ಹೊನ್ನುಡಿಕೆ, ಮಲ್ಲಸಂದ್ರ ಕೆರೆಯ ಮೂಲಕ ಗುಬ್ಬಿ ತಾಲೂಕಿಗೆ ದಾಳಿ ಮಾಡಿದ ಒಂಟಿ ಸಲಗ, ಕಳೆದ ಮೂರು ದಿನಗಳಿಂದ ಗುಬ್ಬಿ ತಾಲೂಕಿನಲ್ಲೇ ಸಂಚರಿಸುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಓಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ರಮೇಶ್ ಭೇಟಿ ನೀಡಿದ್ದು, ಗುಬ್ಬಿ ಪೊಲೀಸ್ ಠಾಣೆಯ ಪಿಎಸ್ಸೈ ಗಂಗಾಧರ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.





