ಮಳೆಬೆಳೆ ಸಮೃದ್ಧಿಗಾಗಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ: ಮಹಾರಾಜ ಯದುವೀರ
ಸಾಗರದ ಮಾರಿಕಾಂಬಾ ದೇವಾಲಯಕ್ಕೆ ಮೈಸೂರು ಮಹಾರಾಜ ಯದುವೀರ ಭೇಟಿ
.jpg)
ಸಾಗರ, ಫ.14: ‘ರಾಜ್ಯದಲ್ಲಿ ಮಳೆಬೆಳೆ ಕೊರತೆಯಾಗದಂತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಚಾಮುಂಡೇಶ್ವರಿಯ ಪ್ರೇರಣೆಯಿಂದಲೇ ಸಾಗರದ ಇತಿಹಾಸ ಪ್ರಸಿದ್ಧ ಮಾರಿಕಾಂಬಾ ಜಾತ್ರೆ ಸಂದರ್ಭ ಇಲ್ಲಿಗೆ ಆಗಮಿಸಿ ಶ್ರೀದೇವಿಯ ದರ್ಶನ ಪಡೆದಿದ್ದೇವೆ’ ಎಂದು ಮೈಸೂರು ಮಹಾರಾಜ ಯದುವೀರ ತಿಳಿಸಿದರು. ಇಲ್ಲಿನ ಮಾರಿಕಾಂಬಾ ಜಾತ್ರೆ ಅಂಗವಾಗಿ ಸಾಗರಕ್ಕೆ ಆಗಮಿಸಿ ಶ್ರೀದೇವಿಯ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೋಗದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದಾಗ, ಸಾಗರದ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆಯಲು ಪ್ರೇರಣೆಯಾಗಿದೆ ಎಂದರು. ‘ಜಾತ್ರೆ, ಉತ್ಸವಗಳು ಮನುಷ್ಯನಿಗೆ ಸೌಹಾರ್ದ ಜೀವನ ನಡೆಸುವ ಸಂದೇಶ ನೀಡುತ್ತವೆ.
ಇಂತಹ ಉತ್ಸವಗಳನ್ನು ಆಚರಿಸಿ, ನಾವು ಪೂಜಿಸುವ ದೇವರಿಗೆ ಪೂಜೆ ಸಲ್ಲಿಸಿದಾಗ ಸಮಸ್ಯೆಗಳ ಜೊತೆಗೆ ಸುತ್ತಮುತ್ತಲಿನ ಕಷ್ಟಕಾರ್ಪಣ್ಯಗಳು ದೂರವಾಗುತ್ತವೆ ಎನ್ನುವುದು ಹಿಂದಿನಿಂದಲೂ ನಂಬಿಕೊಂಡು ಬಂದಂತಹ ಪದ್ಧತಿಯಾಗಿದೆ. ಸಹಸ್ರಾರು ಪ್ರಜೆಗಳ ಜೊತೆಗೆ ನಾನು ಶ್ರೀದೇವಿಗೆ ಉಡಿ ನೀಡಿ, ಪೂಜೆ ಸಲ್ಲಿಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ’ ಎಂದರು. ‘ನಮ್ಮ ವಂಶಸ್ಥರು ಪ್ರತೀ ಮೂರುವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬಾ ಜಾತ್ರೆಗೆ ಉಡಿ ಕಳಿಸಿಕೊಡುತ್ತಿದ್ದರು ಎನ್ನುವುದನ್ನು ತಿಳಿದುಕೊಂಡಿದ್ದೇನೆ.
ಮುಂದಿನ ಜಾತ್ರೆ ಸಂದರ್ಭದಲ್ಲಿ ಖುದ್ದಾಗಿ ಅಥವಾ ನಮ್ಮ ಪರವಾಗಿ ಶ್ರೀದೇವಿಗೆ ಉಡಿ ಕಳುಹಿಸಿ ಕೊಡಲಾಗುತ್ತದೆ. ಜೊತೆಗೆ ಇಲ್ಲಿನ ಪ್ರಾಚೀನ ದೇವಾಲಯಗಳ ಬಗ್ಗೆ ನಮ್ಮ ವಂಶಕ್ಕೆ ಇರುವ ಸಂಬಂಧಗಳನ್ನು ಓದಿ ತಿಳಿದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಅಂತಹ ಸ್ಥಳಗಳಿಗೂ ಭೇಟಿ ನೀಡುವ ಬಗ್ಗೆ ಗಮನ ಹರಿಸುತ್ತೇನೆ’ ಎಂದು ತಿಳಿಸಿದರು. ರಾಜಕೀಯಕ್ಕೆ ಬರುತ್ತೀರಾ ಎಂದು ಪ್ರಶ್ನಿಸಿದ ಮಾಧ್ಯಮಕ್ಕೆ ಉತ್ತರ ನೀಡಿದ ಯದುವೀರ ಅವರು, ರಾಜಕೀಯಕ್ಕೆ ಬರಬೇಕೋ ಬೇಡವೋ ಎನ್ನುವ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಬರುವುದಿಲ್ಲ ಎಂದು ಹೇಳುವುದೂ ಇಲ್ಲ. ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರ ಆಯ್ಕೆ ಕುರಿತು ಚಿಂತನೆ ನಡೆಸುತ್ತೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾರಿಕಾಂಬಾ ದೇವಾಲಯ ವ್ಯವಸ್ಥಾಪಕ ಸಮಿತಿ ವತಿಯಿಂದ ಮಹಾರಾಜ ಯದುವೀರ ಹಾಗೂ ಪತ್ನಿ ಋಷಿಕಾ ಅವರನ್ನು ಸನ್ಮಾನಿಸಲಾಯಿತು. ವ್ಯವಸ್ಥಾಪಕ ಸಮಿತಿ ಗೌರವಾಧ್ಯಕ್ಷ ಕಾಗೋಡು ಅಣ್ಣಪ್ಪ, ಅಧ್ಯಕ್ಷ ನಾಗೇಂದ್ರ ಕೆ.ಎನ್., ಉಪಾಧ್ಯಕ್ಷ ಯು.ಎಲ್.ಮಂಜಪ್ಪ, ಖಜಾಂಚಿ ನಾಗೇಂದ್ರ ಕುಮಟಾ, ವಿವಿಧ ಸಮಿತಿಯ ಸಂಚಾಲಕರಾದ ಪುರುಷೋತ್ತಮ, ಚಂದ್ರು, ನವೀನ್ ಮತ್ತಿತರರಿದ್ದರು.







