ಉತ್ತರಾಖಂಡ ಇಂದು ಮತದಾನ: ಉತ್ತರಪ್ರದೇಶದಲ್ಲಿ 2ನೆ ಹಂತ
ಲಕ್ನೋ/ಡೆಹ್ರಾಡೂನ್,ಫೆ.14: ಉತ್ತರಪ್ರದೇಶದ ವಿಧಾನಸಭೆಯ 67 ಕ್ಷೇತ್ರಗಳಲ್ಲಿ ಹಾಗೂ ಪರ್ವತರಾಜ್ಯವಾದ ಉತ್ತರಾಖಂಡದಲ್ಲಿ ಒಂದು ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲಾ 69 ಕ್ಷೇತ್ರಗಳಲ್ಲಿ ಬುಧವಾರ ಮತದಾನ ನಡೆಯಲಿದೆ.
ಉತ್ತರಪ್ರದೇಶದಲ್ಲಿ ಎರಡನೆ ಹಂತದ ಚುನಾವಣೆ ಇದಾಗಿದ್ದು, 11 ಜಿಲ್ಲೆಗಳಲ್ಲಿ ಹರಡಿರುವ 67 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಹೆಚ್ಚಿನ ಕ್ಷೇತ್ರಗಳಲ್ಲಿ ಎಸ್ಪಿ-ಕಾಂಗ್ರೆಸ್ ಮೈತ್ರಿಕೂಟ, ಬಿಜೆಪಿ ಹಾಗೂ ಬಿಎಸ್ಪಿ ನಡುವೆ ತ್ರಿಕೋನ ಸ್ಪರ್ಧೆಯಿದೆ. ಒಟ್ಟು 720 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ. ಈ ಪೈಕಿ ಬರಾಹ್‌ಪುರ್ ಕ್ಷೇತ್ರದಲ್ಲಿ ಗರಿಷ್ಠ ಸಂಖ್ಯೆಯ 22 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಅಮ್ರೋಹಾ ಜಿಲ್ಲೆಯ ಧನುವಾರಾ ಜಿಲ್ಲೆಯಲ್ಲಿ ಅತ್ಯಂತ ಕನಿಷ್ಠ ಅಂದರೆ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2.28 ಕೋಟಿ ಮಂದಿ ಮತದಾರರಿದ್ದು, ಅವರಲ್ಲಿ 1.04 ಕೋಟಿ ಮಹಿಳೆಯರು. ಉತ್ತರಪ್ರದೇಶದಲ್ಲಿ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಸಮಾಜವಾದಿ ಪಕ್ಷದ ಪ್ರಮುಖ ಸಚಿವರಲ್ಲೊಬ್ಬರಾದ ಅಝಂ ಖಾನ್ ಹಾಗೂ ಅವರ ಪುತ್ರ ಅಬ್ದುಲ್ಲಾ ಅಝಂ ಭವಿಷ್ಯ ಇಂದು ನಿರ್ಧಾರವಾಗಲಿದ್ದು, ಅವರು ಕ್ರಮವಾಗಿ ರಾಮ್‌ಪುರ್ ಹಾಗೂ ಸ್ವಾರ್ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ಮಾಜಿ ಕಾಂಗ್ರೆಸ್ ಸಚಿವ ಝಫರ್ ಅಲಿ ನಖ್ವಿ ಅವರ ಪುತ್ರ ಸಯೀಫ್ ಅಲಿ ನಖ್ವಿ, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಕುಮಾರ್ ಖನ್ನಾ ಇಂದು ಚುನಾವಣೆಯನ್ನೆದುರಿಸಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.





