ಜೆಹಾನ್ ದಾರುವಾಲಾಗೆ ಪ್ರಶಸ್ತಿ
ನ್ಯೂಝಿಲೆಂಡ್ ಗ್ರಾನ್ ಪ್ರಿ

ಮ್ಯಾನ್‌ಫೀಲ್ಡ್(ನ್ಯೂಝಿಲೆಂಡ್), ಫೆ.14: ಭಾರತದ ಯುವ ಮೋಟಾರ್ ರೇಸರ್ ಜೆಹಾನ್ ದಾರುವಾಲಾ ನ್ಯೂಝಿಲೆಂಡ್ ಗ್ರಾನ್ ಪ್ರಿ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಜೆಹಾನ್ ಇಲ್ಲಿ ರವಿವಾರ ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಗ್ರಾನ್‌ಪ್ರಿ ಪ್ರಶಸ್ತಿ ವಿಜೇತ ಭಾರತದ ಮೊತ್ತ ಮೊದಲ ಸ್ಪರ್ಧಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಕಳೆದ ವಾರಾಂತ್ಯದಲ್ಲಿ ಟೊಯೊಟಾ ರೇಸಿಂಗ್ ಸರಣಿಯಲ್ಲಿ ಪೋಲ್ ಪೊಸಿಶನ್-1ರಲ್ಲಿ ಸ್ಥಾನ ಪಡೆದಿದ್ದ ಜೆಹಾನ್ ನ್ಯೂಝಿಲೆಂಡ್ ಗ್ರಾನ್‌ಪ್ರಿನಲ್ಲೂ ಉತ್ತಮ ಪ್ರದರ್ಶನ ಮುಂದುವರಿಸಿದ್ದರು.
ಮಕಾವು ಜಿಪಿ ಬಳಿಕ ನ್ಯೂಝಿಲೆಂಡ್ ಜಿಪಿ ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಅತ್ಯಂತ ಮುಖ್ಯ ರೇಸ್ ಆಗಿದೆ. ಫೆರಾರಿ ಅಕಾಡಮಿಯ ರೇಸರ್ ಮಾರ್ಕಸ್ ಆರ್ಮ್‌ಸ್ಟ್ರಾಂಗ್ ಎರಡನೆ ಹಾಗೂ ಥಾಮಸ್ ರ್ಯಾಂಡ್ಲೆ ಮೂರನೆ ಸ್ಥಾನ ಪಡೆದರು.
ಜೆಹಾನ್ ಫಿಯಾ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಜಯಿಸಿದ ಭಾರತದ ಮೊದಲ ರೇಸರ್. 2014ರಲ್ಲಿ ಫಿಯ ವರ್ಲ್ಡ್ ಕಾರ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್-ಅಪ್ ಆಗಿದ್ದರು. 2012ರಲ್ಲಿ ಮಕಾವುವಿನಲ್ಲಿ ಏಷ್ಯಾ ಪೆಸಿಫಿಕ್ ಕೆಎಫ್3 ಚಾಂಪಿಯನ್‌ಶಿಪ್‌ನ್ನು ಜಯಿಸಿದ ಭಾರತದ ಮೊತ್ತಮೊದಲ ರೇಸರ್ ಆಗಿದ್ದರು.







