ಹಿಂಸೆಗೆ ತಿರುಗಿದ ರೈತರ ರ್ಯಾಲಿ: ಎಸ್ಪಿಗೆ ಗಾಯ
ಅಹ್ಮದಾಬಾದ್, ಫೆ.14: ಸಮೀಪದ ಸಾನಂದ್ ನಗರದಲ್ಲಿ ನಡೆಯುತ್ತಿದ್ದ ರೈತರ ರ್ಯಾಲಿಯೊಂದನ್ನು ತಡೆಯಲು ಪೊಲೀಸರು ಯತ್ನಿಸಿದಾಗ ಉದ್ರಿಕ್ತಗೊಂಡ ಪ್ರತಿಭಟನಾಕಾರರು ಕಲ್ಲೆಸೆತ ನಡೆಸಿದಾಗ ಜಿಲ್ಲಾ ಪೊಲೀಸ್ ಸುಪರಿಂಟೆಂಡೆಂಟ್ ಆರ್.ವಿ. ಅಸಾರಿ ಸೇರಿದಂತೆ ಕನಿಷ್ಟ 7 ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರಲ್ಲದೆ ಲಾಠಿಚಾರ್ಜ್ ನಡೆಸಿದರು. ನಾಲ್ ಸರೋವರ್ ಬಳಿಯ ಹಳ್ಳಿಯ ರೈತರು ನೀರು ಪೂರೈಕೆಯ ಸಮಸ್ಯೆಯ ಪರಿಹಾರಕ್ಕೆ ಆಗ್ರಹಿಸಿ ತಮ್ಮ ಹಳ್ಳಿಯಿಂದ ಗಾಂಧೀನಗರದವರೆಗೆ ಪ್ರತಿಭಟನಾ ರ್ಯಾಲಿ ನಡೆಸಲು ಮುಂದಾಗಿದ್ದು ಇದಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಆದರೂ ರ್ಯಾಲಿ ಆರಂಭಿಸಿದ್ದ ರೈತರನ್ನು ಸಾನಂದ್ ಬಳಿ ತಡೆದ ಪೊಲೀಸರು ಮುಂದುವರಿಯದಂತೆ ಅವರ ಮನವೊಲಿಸಲು ಮುಂದಾಗಿದ್ದರು. ರ್ಯಾಲಿಯನ್ನು ಆಯೋಜಿಸಿದ್ದ ಮುಖಂಡರ ಜೊತೆ ಪೊಲೀಸರ ಮಾತುಕತೆ ಸಾಗುತ್ತಿದ್ದಂತೆಯೇ ಕೆಲವರು ಪೊಲೀಸರತ್ತ ಕಲ್ಲು ತೂರಿದ್ದು ಇದರಿಂದ ಎಸ್ಪಿ ಸೇರಿದಂತೆ ಸುಮಾರು ಏಳು ಪೊಲೀಸರು ಗಾಯಗೊಂಡರು. ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿ ಲಾಠೀಚಾರ್ಜ್ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಸುಮಾರು 3 ಸಾವಿರ ಮಂದಿ ಪಾಲ್ಗೊಂಡಿದ್ದು ಕಲ್ಲು ತೂರಾಟದ ಘಟನೆಗೆ ಸಂಬಂಧಿಸಿ 15 ಜನರನ್ನು ಬಂಧಿಸಲಾಗಿದೆ. ಘಟನೆಯ ಕುರಿತು ಎಫ್‌ಐಆರ್ ದಾಖಲಿಸಲಾಗಿದ್ದು ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆ ಇದೀಗ ರಾಜಕೀಯ ತಿರುವು ಪಡೆದಿದ್ದು ಪಟೇಲ್ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸುತ್ತಿರುವ ಸಂಘಟನೆಯ ಮುಖಂಡ ಹಾರ್ದಿಕ್ ಪಟೇಲ್, ಜನರನ್ನು ಬೆದರಿಸಿ ತನ್ನ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ರಾಜ್ಯ ಸರಕಾರವನ್ನು ಟೀಕಿಸಿದ್ದಾರೆ. ನ್ಯಾಯ್ಕಕಾಗಿ ಧ್ವನಿ ಎತ್ತುವವರನ್ನು ನಿಗ್ರಹಿಸುವಲ್ಲಿ ಹೆಸರಾದ ರಾಜ್ಯದ ಬಿಜೆಪಿ ಸರಕಾರದ ನಿರ್ದೇಶನದಂತೆ ಪೊಲೀಸರು ಅಮಾಯಕ ರೈತರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ತಮ್ಮ ಕೃಷಿಭೂಮಿಗೆ ಅಗತ್ಯವಿರುವ ನೀರಿಗಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ನಡೆದ ದೌರ್ಜನ್ಯ ಖಂಡಿಸುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಮನೀಷ್ ದೋಷಿ.





