ನಕಲಿ ನೇಮಕಾತಿ ಪತ್ರದೊಂದಿಗೆ ಸೇನೆಗೆ ಸೇರಲು ಬಂದರು...!
ಕಲ್ಯಾಣಿ, (ಪ.ಬಂಗಾಲ), ಫೆ.14: ನಕಲಿ ಪ್ರಮಾಣ ಪತ್ರ, ಅಂಕಪತ್ರದ ಬಳಿಕ ಇದೀಗ ನಕಲಿ ನೇಮಕಾತಿ ಪತ್ರದ ಸರದಿ. ನಕಲಿ ನೇಮಕಾತಿ ಪತ್ರ ಹಿಡಿದುಕೊಂಡು ಬಿಎಸ್‌ಎಫ್ (ಗಡಿ ಭದ್ರತಾ ಪಡೆ) ಸೇರಲು ಬಂದಿದ್ದ 30 ಮಂದಿಯ ವಿರುದ್ಧ ದೂರು ದಾಖಲಿಸಲಾಗಿದೆ. 12 ಯುವತಿಯರೂ ಸೇರಿದಂತೆ 30 ಮಂದಿ ಸೋಮವಾರ ಬಿಎಸ್‌ಎಫ್‌ನ 144ನೇ ಬೆಟಾಲಿಯನ್ ಕಚೇರಿಗೆ ಬಂದು, ತಮಗೆ ಬಿಎಸ್‌ಎಫ್‌ನಿಂದ ಬಂದಿರುವ ನೇಮಕಾತಿ ಪತ್ರದ ಆಧಾರದಲ್ಲಿ ಕರ್ತವ್ಯಕ್ಕೆ ಸೇರಿಕೊಳ್ಳಲು ಬಂದಿರುವುದಾಗಿ ಕಚೇರಿಯ ಸಿಪಾಯಿಯಲ್ಲಿ ತಿಳಿಸಿದ್ದಾರೆ. ಅವರಲ್ಲಿ ಕೆಲವರನ್ನು ಕಾನ್‌ಸ್ಟೆಬಲ್, ಕೆಲವರನ್ನು ಸಬ್-ಇನ್‌ಸ್ಪೆಕ್ಟರ್, ರೇಡಿಯೋ ಆಪರೇಟರ್.. ಹೀಗೆ ನೇಮಕಾತಿ ಮಾಡಿರುವ ಆದೇಶ ಪತ್ರ ಅವರಲ್ಲಿತ್ತು. ವಿಚಾರಣೆ ವೇಳೆ ಕೋಲ್ಕತ್ತಾದ ಡಂಡಂ ಕಂಟೋನ್ಮೆಂಟ್ ಪ್ರದೇಶದ ಸಂಜಯ್ ದಾಸ್ ಅಲಿಯಾಸ್ ಬಿಮಲ್ ದಾಸ್ ಎಂಬ ವ್ಯಕ್ತಿಯೋರ್ವ ತಮಗೆ ನೇಮಕಾತಿ ಪತ್ರ, ವೈದ್ಯಕೀಯ ಪ್ರಮಾಣ ಪತ್ರ ಇತ್ಯಾದಿ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ತಾನೋರ್ವ ಬಿಎಸ್‌ಎಫ್ ಅಧಿಕಾರಿ ಎಂದು ಸಂಜಯ್ ಹೇಳಿಕೊಂಡಿದ್ದ. ಪೊಲೀಸರು ಹೇಳುವ ಪ್ರಕಾರ, ಸೇನೆಗೆ ಸೇರ್ಪಡೆಗೊಳಿಸುವುದಾಗಿ ಹೇಳಿದ ಸಂಜಯ್ ದಾಸ್, ಈ ಯುವಕರಿಂದ ಲಕ್ಷಗಟ್ಟಲೆ ಹಣ ಪಡೆದಿದ್ದು ಬಳಿಕ ನಕಲಿ ನೇಮಕಾತಿ ಪತ್ರ ನೀಡಿದ್ದಾನೆ. ಈತನ ಮಾತನ್ನು ನಂಬಿದ ಯುವಕರು ಮೋಸಹೋಗಿದ್ದಾರೆ. ಈ ಯುವಕರು ಆತ ಹೇಳಿದ ಮೊತ್ತದ ಅರ್ಧಾಂಶವನ್ನು ನಗದು ರೂಪದಲ್ಲಿ , ಉಳಿದ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕೊಂದರ ಖಾತೆಗೆ ಜಮೆ ಮಾಡಿದ್ದಾರೆ. ಇದೀಗ ಆ ಬ್ಯಾಂಕ್ ಖಾತೆಯ ಆಧಾರದಲ್ಲಿ ಸಂಜಯ್‌ದಾಸ್ ಅಸ್ಸಾಂನ ನಗಾಂವ್ ಜಿಲ್ಲೆಯ ನಿವಾಸಿ ಎಂದು ತಿಳಿದು ಬಂದಿದೆ.





