ವಿದಾ್ಯರ್ಥಿಗಳ ‘ಆರ್‌ಟಿಇ’ಗೆ ಸಾಫ್ಟ್‌ವೇರ್ ಕಾಟ!
ಹೆತ್ತವರಿಗೆ ಕಾಡಿದ ಆತಂಕ

ಮಂಗಳೂರು, ಫೆ.14: ಎಲ್ಲರಿಗೂ ಶಿಕ್ಷಣ ಲಭ್ಯವಾಗಬೇಕು ಎಂಬ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಜಾರಿಗೊಳಿಸಲಾಗುತ್ತಿರುವ ‘ಆರ್‌ಟಿಇ’ಸೀಟುಗಳಿಗೆ ಇದೀಗ ‘ಸಾಫ್ಟ್‌ವೇರ್’ ಕಾಟ ಶುರುವಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
2017-18ನೆ ಸಾಲಿನ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳಲ್ಲಿ ಆರ್‌ಟಿಇ ಕಾಯ್ದೆಯಡಿ ಎಲ್‌ಕೆಜಿ/1ನೆ ತರಗತಿಗೆ ಪ್ರವೇಶ ಪಡೆಯಲು ಜ.20ರಿಂದ ಅರ್ಜಿ ಆಹ್ವಾನಿಸಲಾಗುತ್ತದೆ ಎಂದು ಸುದ್ದಿಯಾಗಿತ್ತು. ಆ ಬಳಿಕ ಫೆ.15ರಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಬಗ್ಗೆ ಡಿಡಿಪಿಐ ಕಚೇರಿಯಿಂದ ಈವರೆಗೆ ಯಾವುದೇ ಮಾಹಿತಿ ಪ್ರಕಟಿಸಿಲ್ಲ. ಆದರೆ ಇದೀಗ ತಿಳಿದು ಬಂದ ಮಾಹಿತಿ ಪ್ರಕಾರ ‘ಆರ್‌ಟಿಇ’ಗೆ ಸಾಫ್ಟ್‌ವೇರ್ ಕಾಟ ಶುರುವಾಗಿದೆ. ಆ ಹಿನ್ನೆಲೆಯಲ್ಲಿ ಡಿಡಿಪಿಐ ಕಚೇರಿಯನ್ನು ‘ವಾರ್ತಾಭಾರತಿ’ ಪ್ರಶ್ನಿಸಿದಾಗ ‘ಹೌದು ಸಾಫ್ಟ್‌ವೇರ್ ಸಮಸ್ಯೆ ಕಾಡಿದೆ. ಶಿಕ್ಷಣ ಇಲಾಖೆಯಿಂದ ನಮಗೆ ಯಾವುದೇ ಮಾಹಿತಿ ಬಂದಿಲ್ಲ’ಎಂಬ ಉತ್ತರ ಲಭಿಸಿದೆ.
ಆರ್‌ಟಿಇ ಸೀಟಿಗೆ ಸಂಬಂಧಿಸಿ ಶಿಕ್ಷಣ ಇಲಾಖೆ ವರ್ಷಂಪ್ರತಿ ನಿಯಮಾವಳಿಗಳನ್ನು ಬದಲಾಯಿಸುತ್ತಲೇ ಇದೆ. ಇದರಿಂದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲು ಆರ್ಥಿಕವಾಗಿ ಹಿಂದುಳಿದ ಮಕ್ಕಳ ಹೆತ್ತವರ ಕನಸು ನುಚ್ಚುನೂರಾಗುತ್ತಿವೆ. ಈ ಮಧ್ಯೆ ಶಿಕ್ಷಣ ಇಲಾಖೆಯು ಕೊನೆಯ ಕ್ಷಣದಲ್ಲಿ ಶಾಲೆಗಳಲ್ಲಿ ಲಭ್ಯವಿರುವ ಸೀಟುಗಳ ಪಟ್ಟಿಯನ್ನು ಬಿಡುಗಡೆಗೊಳಿಸುವುದರಿಂದಲೂ ಹೆತ್ತವರು ಅತಂತ್ರರಾಗುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಯ ಜೊತೆ ಇಲಾಖಾಧಿಕಾರಿಗಳು ಕೈ ಜೋಡಿಸುವುದರಿಂದಲೇ ಪಟ್ಟಿಯನ್ನು ಬಿಡುಗಡೆ ಮಾಡಲು ತಡಮಾಡಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ.
ಪ್ರತಿ ವರ್ಷ ಆರ್‌ಟಿಇ ಸೀಟು ಪಡೆಯಲು ‘ಆನ್‌ಲೈನ್’ನ ಮೊರೆ ಹೋಗಲಾಗುತ್ತದೆ. ಗ್ರಾಮಾಂತರ ಪ್ರದೇಶದ ಮಕ್ಕಳಿಗೆ, ಅವರ ಹೆತ್ತವರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಆದರೂ ಕೂಡ ಹೆತ್ತವರ ಮತ್ತು ಮಕ್ಕಳ ಆಧಾರ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಮಕ್ಕಳ ಜನನ ಪ್ರಮಾಣ ಪತ್ರ, ಮಕ್ಕಳ ಫೊಟೋ ಇತ್ಯಾದಿ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಬಕಪಕ್ಷಿಯಂತೆ ಕಾದ ಹೆತ್ತವರಿಗೆ ಇದೀಗ ‘ಸಾಫ್ಟ್‌ವೇರ್’ ಕಾಟ ಸಮಸ್ಯೆಯಾಗಿ ಪರಿಣಮಿಸಿದೆ. ಅಲ್ಲದೆ ಆತಂಕವೂ ಕಾಡಿದೆ.
ಸಾಮಾನ್ಯವಾಗಿ ಮಕ್ಕಳ ಹೆತ್ತವರು ಎರಡ್ಮೂರು ಶಾಲೆಗಳಲ್ಲಿ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸಿರುತ್ತಾರೆ. ಆದರೆ ನಿರ್ದಿಷ್ಟ ಶಾಲೆಗೆ ಪ್ರವೇಶ ಪಡೆಯಲು ಆಯ್ಕೆಯಾದರೂ ಕೂಡ ನಾನಾ ಕಾರಣ ನೀಡಿ ಸೀಟು ನೀಡಲು ಹಿಂದೇಟು ಹಾಕುತ್ತಿವೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಇಂತಹ ಹಲವು ಪ್ರಕರಣಗಳು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ವರ್ಷ ದ.ಕ.ಜಿಲ್ಲೆಗೆ 2,274 ಸೀಟುಗಳು ಲಭ್ಯವಾಗಿತ್ತು. ಅದಕ್ಕಾಗಿ 3,300ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿತ್ತು. ಆದರೆ ಪರಿಶೀಲನೆಯ ಬಳಿಕ ಕೇವಲ 1,840 ಮಂದಿಗೆ ಆರ್‌ಟಿಇ ಸೀಟು ಸಿಕ್ಕಿತ್ತು. ಅಂದರೆ, ಸುಮಾರು 434 ಮಂದಿಯ ಆರ್‌ಟಿಇ ಸೀಟು ಖಾಲಿ ಬಿದ್ದಿತ್ತು. ಜನವರಿ ತಿಂಗಳಲ್ಲೇ ಯಾವ ಶಾಲೆಗೆ ಎಷ್ಟು ಸೀಟುಗಳನ್ನು ಕಾಯ್ದಿರಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಿದರೆ ಖಾಲಿಯಿರುವ ಸೀಟುಗಳನ್ನು ತುಂಬಲು ಸಮಯವಕಾಶವಿರುತ್ತದೆ. ಆದರೆ ಶಿಕ್ಷಣ ಇಲಾಖೆ ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಹೇಳಲಾಗುತ್ತದೆ.
ಒಟ್ಟಿನಲ್ಲಿ ಫೆ.15ರಿಂದ ಆರ್‌ಟಿಇ ಸೀಟಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದ ವಿದ್ಯಾರ್ಥಿಗಳ ಹೆತ್ತವರಿಗೆ ಇದೀಗ ಆತಂಕ ಕಾಡಿದೆ.
**ಶಿಕ್ಷಣ ಇಲಾಖೆಯು ಕೊನೆಯ ಕ್ಷಣದಲ್ಲಿ ಆರ್‌ಟಿಇ ಸೀಟುಗಳನ್ನು ಘೋಷಣೆ ಮಾಡುವುದರಿಂದ ಇಂತಹ ಸಮಸ್ಯೆಯನ್ನು ಸಕಾಲಕ್ಕೆ ಪರಿಹರಿಸಲು ವಿಫಲವಾಗುತ್ತದೆ. ಇದರ ಲಾಭವನ್ನು ಖಾಸಗಿ ಶಿಕ್ಷಣ ಸಂಸ್ಥೆ ಪಡೆಯುತ್ತದೆ.
ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ, ಆರ್‌ಟಿಇ ಕಾರ್ಯಕರ್ತ.







