ಹಾಲಿವುಡ್ ಸ್ಟಾರ್ ಹ್ಯೂ ಜಾಕ್ ಮ್ಯಾನ್ ಗೆ ಆರನೇ ಬಾರಿ ಕ್ಯಾನ್ಸರ್ ಚಿಕಿತ್ಸೆ

ಸಿಡ್ನಿ, ಫೆ.15: ಆಸ್ಟ್ರೇಲಿಯಾ ಮೂಲದ ಹಾಲಿವುಡ್ ನಟ್, ಎಕ್ಸ್-ಮೆನ್ ಚಿತ್ರದ ಖ್ಯಾತಿಯ ಹ್ಯೂ ಜಾಕ್ ಮ್ಯಾನ್ ಅವರು ಆರನೆ ಬಾರಿ ಚರ್ಮದ ಕ್ಯಾನ್ಸರಿಗೆ ಚಿಕಿತ್ಸೆ ಪಡೆದಿದ್ದಾರೆ. ತಮ್ಮ ಮೂಗಿಗೆ ಪ್ಲಾಸ್ಟರ್ ಹಾಕಿರುವ ತನ್ನ ಚಿತ್ರವನ್ನು 48 ವರ್ಷದ ನಟ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವೈದ್ಯರು ಅವರಿಗೆ ಸನ್ ಸ್ಕ್ರೀನ್ ಕಡ್ಡಾಯವಾಗಿ ಹಾಕಬೇಕೆಂದು ಹೇಳಿದ್ದಾರೆ.
''ಇನ್ನೊಂದು ಬಾಸಲ್ ಸೆಲ್ ಕಾರ್ಸಿನೋಮ. ನಿಯಮಿತ ತಪಾಸಣೆ ಹಾಗೂ ಅತ್ಯುತ್ತಮ ವೈದ್ಯರಿಗೆ ಧನ್ಯವಾದಗಳು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ'' ಎಂದು ಅವರ ಪೋಸ್ಟ್ ಹೇಳಿದೆ. ''ಪ್ಲಾಸ್ಟರ್ ಇರುವುದಕ್ಕಿಂತ ಇಲ್ಲದೇ ಇರುವುದು ವಾಸಿ'' ಎಂದೂ ಅವರು ಹೇಳಿಕೊಂಡಿದ್ದಾರೆ.
2013ರಲ್ಲಿ ಮೊದಲ ಬಾರಿಗೆ ಬಾಸಲ್ ಸೆಲ್ ಕಾರ್ಸಿನೋಮ ಪೀಡಿತರಾಗಿದ್ದರು ಹ್ಯೂ. ಅವರ ಮೂಗಿನಲ್ಲಿರುವ ಕಲೆಯೊಂದನ್ನು ನೋಡಿ ಅವರ ಪತ್ನಿ ಡೆಬೋರ್ರ-ಲೀ ಫರ್ನೆಸ್ಸ್ ವೈದ್ಯರ ಬಳಿ ತೋರಿಸಲು ಹೇಳಿದಾಗ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು.ಈ ರೋಗಕ್ಕಾಗಿ ಹ್ಯೂ ಅವರು ಕಳೆದ ವರ್ಷದ ಫೆಬ್ರವರಿಯಲ್ಲಿ ಸೇರಿದಂತೆ ಹಲವು ಬಾರಿ ಚಿಕಿತ್ಸೆ ಪಡೆದಿದ್ದರು.
ಸೂರ್ಯನ ಕಿರಣಗಳಿಗೆ ಅತಿ ಹೆಚ್ಚು ತೆರೆದುಕೊಂಡಿರುವ ದೇಹದ ಭಾಗದಲ್ಲಿ ಈ ಕ್ಯಾನ್ಸರ್ ಸಾಮಾನ್ಯವಾಗಿ ಕಾಣಿಸುತ್ತದೆ. ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಚರ್ಮದ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತವೆ.







