ಈ ಚುನಾವಣೆಯಲ್ಲಿ ದೊಡ್ಡ ದೊಡ್ಡ ಜಟ್ಟಿಗಳು ಮಣ್ಣುಮುಕ್ಕುತ್ತಾರೆ !
ಬಿಜೆಪಿಯತ್ತ ರಾಮದೇವ್ ಬಾಣ

# ಚಾಯ್ ವಾಲನನ್ನು ಪಿಎಂ ಮಾಡಿದ ಜನ ಪೈಲ್ವಾನನನ್ನು ಸಿಎಂ ಮಾಡಬಲ್ಲರು
ಹೊಸದಿಲ್ಲಿ, ಫೆ.15: ಉತ್ತರಾಖಂಡ್ ವಿಧಾನಸಭೆಗೆ ಇಂದು ಚುನಾವಣೆ ನಡೆಯುತ್ತಿದ್ದು ಅಲ್ಲಿನ ಮತಗಟ್ಟೆಯೊಂದಕ್ಕೆ ಆಗಮಿಸಿ ತಮ್ಮ ಮತ ಚಲಾಯಿಸಿದ ಯೋಗ ಗುರು ಬಾಬಾ ರಾಮ್ ದೇವ್ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಈ ಚುನಾವಣೆಯಲ್ಲಿ ದೊಡ್ಡ ದೊಡ್ಡ ಜಟ್ಟಿಗಳು ಮಣ್ಣು ಮುಕ್ಕುತ್ತಾರೆಂದು ಹೇಳಿ ಪರೋಕ್ಷವಾಗಿ ಬಿಜೆಪಿಯತ್ತ ವಾಗ್ಬಾಣ ಹರಿಸಿದರು.
ಕಳೆದ ಲೋಕಸಭಾ ಚುನಾವಣೆ ಸಂದರ್ಭ ಬಹಿರಂಗವಾಗಿ ಬಿಜೆಪಿ ಹಾಗೂ ನರೇಂದ್ರ ಮೋದಿಯನ್ನು ಬೆಂಬಲಿಸಿದ್ದ ರಾಮ ದೇವ್ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಸರಕಾರದ ನೋಟು ಅಮಾನ್ಯೀಕರಣ ಸೇರಿದಂತೆ ಹಲವು ಕಾರ್ಯಕ್ರಮಗಳನ್ನುಬೆಂಬಲಿಸಿದ್ದರೂಈ ವಿಧಾನಸಭಾ ಚುನಾವಣೆಯ ಸಂದರ್ಭ ಬಿಜೆಪಿಯನ್ನು ಬೆಂಬಲಿಸುವ ಗೋಜಿಗೆ ಹೋಗಿಲ್ಲ. ಯಾವುದೇ ಪಕ್ಷವನ್ನು ಏಕೆ ಬೆಂಬಲಿಸಿಲ್ಲ ಎಂಬ ಪತ್ರಕರ್ತರು ಪ್ರಶ್ನಿಸಿದಾಗ ಮತದಾರರು ವಿವೇಚನಾಶೀಲರಾಗಿದ್ದು ಸೂಕ್ತ ಅಭ್ಯರ್ಥಿಗಳನ್ನು ಆರಿಸಲಿದ್ದಾರೆ ಎಂದು ಹೇಳಿದರು. ‘‘ದೇಶದ ಜನ ಚಾಯ್ ವಾಲನನ್ನು ಪ್ರಧಾನ ಮಂತ್ರಿ ಮಾಡಿದರೆ,ಪೈಲ್ವಾನನನ್ನು ಮುಖ್ಯಮಂತ್ರಿಯಾಗಿಸಬಲ್ಲರು,’’ ಎಂದರು.
ಉತ್ತರಾಖಂಡದ ಒಟ್ಟು 70 ವಿಧಾನಸಭಾ ಕ್ಷೇತ್ರಗಳ ಪೈಕಿ 69 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಇಲ್ಲಿನ ಪ್ರತಿಷ್ಠಿತ ಕರ್ಣಪ್ರಯಾಗ್ ಕ್ಷೇತ್ರದಿಂದ ವಿಧಾನಸಭಾ ಉಪ ಸ್ಪೀಕರ್ ಅನಸೂಯ ಪ್ರಸಾದ್ ಮೈಖುರಿ ಸ್ಪರ್ಧಿಸುತ್ತಿದ್ದರೂ ಬಿಎಸ್‌ಪಿ ಅಭ್ಯರ್ಥಿ ಕುಲದೀಪ್ ಸಿಂಗ್ ಕನ್ವಸಿ ಅಪಘಾತವೊಂದರಲ್ಲಿ ಸಾವನ್ನಪ್ಪಿರುವುದರಿಂದ ಇಲ್ಲಿ ಚುನಾವಣೆ ಮಾರ್ಚ್ 9ರಂದು ನಡೆಯಲಿದೆ.





