ರಷ್ಯನ್ ಬೇಹು ಇಲಾಖೆ ಜೊತೆ ಸತತ ಸಂಪರ್ಕದಲ್ಲಿತ್ತು ಟ್ರಂಪ್ ಪ್ರಚಾರ ತಂಡ !
ನ್ಯೂಯಾರ್ಕ್ ಟೈಮ್ಸ್ ಸ್ಪೋಟಕ ವರದಿ

ವಾಷಿಂಗ್ಟನ್, ಪೇ.15: ಅಮೇರಿಕಾದ ಅಧ್ಯಕ್ಷೀಯ ಚುನಾವಣೆಗಿಂತ ಒಂದು ವರ್ಷದ ಮೊದಲೇ ಪ್ರಚಾರದ ಸಂದರ್ಭ ಡೊನಾಲ್ಡ್ ಟ್ರಂಪ್ ಅವರ ತಂಡವು ರಷ್ಯನ್ ಬೇಹುಗಾರಿಕಾ ಇಲಾಖೆಯೊಂದಿಗೆ ಸತತ ಸಂಪರ್ಕದಲ್ಲಿತ್ತು ಎಂದು ಹಲವು ದೂರವಾಣಿ ಕರೆ ಮಾಹಿತಿಗಳಿಂದ ತಿಳಿದು ಬಂದಿದೆಯೆಂಬ ಸ್ಫೋಟಕ ಮಾಹಿತಿಯುಳ್ಳ ವರದಿಯೊಂದನ್ನು ನ್ಯೂಯಾರ್ಕ್ ಟೈಮ್ಸ್ ಮಾಡಿದೆ. ನಾಲ್ಕು ಮಂದಿ ಹಾಲಿ ಹಾಗೂ ಮಾಜಿ ಅಮೇರಿಕಾದ ಅಧಿಕಾರಿಗಳು ನೀಡಿದ ವಿವರಗಳನ್ವಯ ಪತ್ರಿಕೆ ಈ ವರದಿ ಮಾಡಿದೆಯೆನ್ನಲಾಗಿದೆ.
ರಷ್ಯಾ ದೇಶವು ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ತೊಂದರೆಯೊಡ್ಡುವ ಸಲುವಾಗಿ ಡೆಮಾಕ್ರೆಟಿಕ್ ನ್ಯಾಶನಲ್ ಕಮಿಟಿಯನ್ನು ಹ್ಯಾಕ್ ಮಾಡಲು ಯತ್ನಿಸುತ್ತಿದೆಯೆಂಬ ಮಾಹಿತಿಗಳು ದೊರೆಯುತ್ತಿರುವಂತಹ ಸಂದರ್ಭದಲ್ಲಿಯೇ ಟ್ರಂಪ್ ತಂಡ ರಷ್ಯಾ ಬೇಹು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿತ್ತೆಂದು ಮೂವರು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ.
ಆದರೆ ಟ್ರಂಪ್ ಪ್ರಚಾರ ತಂಡ ರಷ್ಯಾದ ಹ್ಯಾಕಿಂಗ್ ಯತ್ನಗಳಿಗೆ ಸಹಾಯ ಮಾಡಿರುವ ಕುರಿತು ತಮಗೆ ಯಾವ ಆಧಾರವೂ ಸಿಕ್ಕಿಲ್ಲವೆಂದು ಕೆಲ ಅಧಿಕಾರಿಗಳು ತಿಳಿಸಿದ್ದಾರೆನ್ನಲಾಗಿದೆ.
ಟ್ರಂಪ್ ಅವರು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡುತ್ತಿರುವ ಹಿಂದಿನ ಮರ್ಮದ ಬಗ್ಗೆ ಅನೇಕರು ಈಗಾಗಲೇ ಅಚ್ಚರಿ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಟ್ರಂಪ್ ಅವರ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಖೇಲ್ ಫ್ಲಿನ್ನ್ ಹಾಗೂ ಅಮೇರಿಕಾದಲ್ಲಿನ ರಷ್ಯಾ ರಾಯಭಾರಿ ಸರ್ಗೇ ಐ ಕಿಸ್ಲ್ಯಕ್ ನಡುವೆ ನಡೆದ ಸಂಭಾಷಣೆಗಿಂತ ಇದೀಗ ಬಹಿರಂಗಗೊಂಡಿವೆಯೆನ್ನಲಾದ ಸಂಭಾಷೆಗಳು ವಿಭಿನ್ನ ಎಂದು ಹೇಳಲಾಗಿದೆ.
ಟ್ರಂಪ್ ಅವರ ಪ್ರಚಾರ ತಂಡ ಮಾತ್ರವಲ್ಲದೆ ಅವರ ಇತರ ಸಹವರ್ತಿಗಳೂ ರಷ್ಯಾದ ಬೇಹು ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದರೆಂದು ತಿಳಿದು ಬಂದಿದೆ. ಹೀಗೆ ಸಂಪರ್ಕ ಸಾಧಿಸಿದವರಲ್ಲಿ ಟ್ರಂಪ್ ಅವರ ಪ್ರಚಾರ ಅಧ್ಯಕ್ಷರಾಗಿ ಕಳೆದ ವರ್ಷ ಹಲವು ತಿಂಗಳುಗಳ ಕಾಲ ಸೇವೆ ಸಲ್ಲಿಸಿದ್ದ ಪೌಲ್ ಮನಫೋರ್ಟ್ ಕೂಡ ಸೇರಿದ್ದಾರೆನ್ನಲಾಗಿದೆ. ಆದರೆ ಇತರ ಅಧಿಕಾರಿಗಳ ಬಗ್ಗೆ ಮಾಹಿತಿಯಿಲ್ಲವಾಗಿದೆ. ಪೌಲ್ ಮಾತ್ರ ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ. ಅದರೆ ಕರೆಯ ಸಂದರ್ಭ ಟ್ರಂಪ್ ಸಹವರ್ತಿಗಳು ಏನು ಮಾತನಾಡಿದ್ದರೆಂಬ ಬಗ್ಗೆ ಅಧಿಕಾರಿಗಳು ಬಾಯ್ಬಿಟ್ಟಿಲ್ಲ.







