ಫೆ.17:ಉಳ್ಳಾಲದಲ್ಲಿ ಪಿಎಫ್‌ಐ ರ‍್ಯಾಲಿ ‘ಯೂನಿಟಿ ಮಾರ್ಚ್ ’ಸಮಾವೇಶ

ಮಂಗಳೂರು,ಫೆ.15: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ಕರ್ನಾಟಕ ಇದರ 10ನೆ ವರ್ಷಾಚರಣೆಯ ಪ್ರಯುಕ್ತ ಫೆ.17ರಂದು ಅಪರಾಹ್ಣ 2.30 ಗಂಟೆಗೆ ಉಳ್ಳಾಲದ ರಾಣಿ ಅಬ್ಬಕ್ಕ ವೃತ್ತದ ಬಳಿ ರ‍್ಯಾಲಿ ಮತ್ತು ಸಮಾವೇಶ ನಡೆಯಲಿದೆ ಎಂದು ಪಾಪ್ಯುಲರ್ ಫ್ರಂಟ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಕೆಮ್ಮಾರ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ದೇಶದ ಸಂವಿಧಾನ,ಪ್ರಜಾಪ್ರಭುತ್ವ,ಜಾತ್ಯತೀತ ವೌಲ್ಯಗಳನ್ನೇ ಪ್ರಶ್ನಿಸುವಂತಹ ಕೋಮುವಾದ ಕಳೆದ ಮೂರು ದಶಕಗಳಿಂದ ತೀವ್ರಗೊಳ್ಳುತ್ತಿದೆ. ನೋಟುಗಳ ನಿಷೇಧದಿಂದ ಆಗಿರುವ ಆರ್ಥಿಕ ಕುಸಿತದಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ವಾತವರಣವಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸಂವಿಧಾನವು ಪ್ರತಿಪಾಧಿಸುವ ಪ್ರಜಾತಂತ್ರ ,ಜಾತ್ಯತೀತ ಮೌಲ್ಯಗಳನ್ನು ಉಳಿಸಿಕೊಳ್ಳಲು ದೇಶದ ವೈವಿಧ್ಯತೆ ಮತ್ತು ಭ್ರಾತೃತ್ವವನ್ನು ಇನ್ನಷ್ಟು ದೃಢ ಪಡಿಸಲು ಸಾಮಾಜಿಕ ರಂಗದಲ್ಲಿ ಕಳೆದ ಒಂದು ದಶಕದಿಂದ ಸಕ್ರೀಯರಾಗಿರುವ ಪಿಎಫ್‌ಐ ಸಂಘಟನೆಯ ಹತ್ತನೆ ವರ್ಷಾಚರಣೆಯ ಸಂದರ್ಭದಲ್ಲಿ ಯೂನಿಟಿ ಮಾರ್ಚ್ ಹಾಗೂ ಸಾರ್ವಜನಿಕ ಸಭೆ ಹಮ್ಮಿಕೊಂಡಿದೆ ಎಂದು ಅಬ್ದುಲ್ ರಝಾಕ್ ಕೆಮ್ಮಾರ ತಿಳಿಸಿದ್ದಾರೆ.
ಸಮಾರಂಭದಲ್ಲಿ ಫಿ.ಎಫ್.ಐ ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಎಂ.ಶರೀಫ್ ,ಖ್ಯಾತ ಬರಹಗಾರ ಯೋಗಿಶ್ ಮಾಸ್ಟರ್ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ರಝಾಕ್ ಕೆಮ್ಮಾರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪಿಎಫ್‌ಐ ಮಂಗಳೂರು ಘಟಕದ ಅಧ್ಯಕ್ಷ ನವಾಝ್ ಉಳ್ಳಾಲ,ಬಂಟ್ವಾಳ ಘಟಕದ ಅಧ್ಯಕ್ಷ ಇಜಾಝ್ ಅಹಮ್ಮದ್,ಜಿಲ್ಲಾ ಸಮಿತಿ ಅಧ್ಯಕ್ಷ ಅಶ್ರಫ್ ಎ.ಕೆ ಮೊದಲಾದವರು ಉಪಸ್ಥಿತರಿದ್ದರು.





