ವಿಚಾರಣಾಧೀನ ಕೈದಿಗಳ ಬಿಡುಗಡೆ: ಹೈಕೋರ್ಟ್‌ಗಳಿಗೆ ಕೇಂದ್ರ ಸಲಹೆ

ಹೊಸದಿಲ್ಲಿ, ಫೆ.15: ದೇಶದಾದ್ಯಂತ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರಕಾರ , ಸಂಭವನೀಯ ಶಿಕ್ಷಾವಧಿಯ ಅರ್ಧಾಂಶದಷ್ಟು ಅವಧಿಯನ್ನು ಜೈಲಿನಲ್ಲೇ ಕಳೆದಿರುವ ವಿಚಾರಣಾಧೀನ ಕೈದಿಗಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಸ್ವಯಂ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ಗಳಿಗೆ ಸಲಹೆ ನೀಡಿದೆ.
ಓರ್ವ ವಿಚಾರಣಾಧೀನ ಕೈದಿಯು ತನ್ನ ಸಂಭವನೀಯ ಶಿಕ್ಷಾವಧಿಯ ಅರ್ಧದಷ್ಟು ಅವಧಿಯನ್ನು ಜೈಲಿನಲ್ಲಿ ಕಳೆದಿದ್ದರೆ ಅಂತವರನ್ನು ಮುಚ್ಚಳಿಕೆ ಸಹಿತ ಅಥವಾ ರಹಿತವಾಗಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಬಹುದು ಎಂದು ‘ಕ್ರಿಮಿನಲ್ ಪ್ರೊಸೀಜರ್ ಕೋಡ್’ನ 436 ಎ ಪರಿಚ್ಛೇದದಲ್ಲಿ ತಿಳಿಸಲಾಗಿದೆ. ಆದರೆ ಮರಣದಂಡನೆ ಶಿಕ್ಷೆ ವಿಧಿಸಬಹುದಾದ ಘೋರ ಅಪರಾಧ ಎಸಗಿದವರ ಪ್ರಕರಣದಲ್ಲಿ ಇದು ಅನ್ವಯಿಸುವುದಿಲ್ಲ.
ಇಂತಹ ಪ್ರಕರಣಗಳ ಬಗ್ಗೆ ಸ್ವಯಂಪ್ರೇರಿತ ಕ್ರಮ ಕೈಗೊಳ್ಳಲು ಜಿಲ್ಲಾ ನ್ಯಾಯಾಲಯಗಳಿಗೆ ಸೂಚಿಸುವಂತೆ 24 ಹೈಕೋರ್ಟ್‌ಗಳ ಮುಖ್ಯ ನ್ಯಾಯಾಧೀಶರಿಗೆ ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಪತ್ರ ಬರೆದಿದ್ದಾರೆ.
ವಿಚಾರಣಾಧೀನ ಕೈದಿಗಳ ಪುನರಾವಲೋಕನ ಸಮಿತಿ ವ್ಯವಸ್ಥೆಯು ಇಂತಹ ಕೈದಿಗಳ ಬಿಡುಗಡೆಗೊಳಿಸುವ ಅಥವಾ ತೀರ್ಪು ನೀಡುವ ಕುರಿತು ನಿಯತಕಾಲಿಕ ಕ್ರಮ ಕೈಗೊಳ್ಳುವ ಮೂಲಕ ವಿಚಾರಣಾಧೀನ ಕೈದಿಗಳ ಮಾನವ ಹಕ್ಕುಗಳ ಕಡೆಗಣನೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆ ಕಚೇರಿಯ ಅಂದಾಜಿನಂತೆ, ದೇಶದ ಜೈಲಿನಲ್ಲಿರುವ ಶೇ.67ರಷ್ಟು ಮಂದಿ ವಿಚಾರಣಾಧೀನ ಕೈದಿಗಳಾಗಿದ್ದಾರೆ. ಅಗ್ರಸ್ಥಾನದಲ್ಲಿರುವ ಬಿಹಾರದಲ್ಲಿ ಶೇ. 82.4, ಜಮ್ಮು-ಕಾಶ್ಮೀರದಲ್ಲಿ ಶೇ.81.5, ಒರಿಸ್ಸಾದಲ್ಲಿ ಶೇ.78.8, ಜಾರ್ಖಂಡ್‌ನಲ್ಲಿ ಶೇ.77.1, ದಿಲ್ಲಿಯಲ್ಲಿ ಶೇ.76.7 ವಿಚಾರಣಾ ಕೈದಿಗಳಿದ್ದಾರೆ.
‘ಕ್ರಿಮಿನಲ್ ಪ್ರೊಸೀಜರ್ ಕೋಡ್’ನ 436 ಎ ಪರಿಚ್ಛೇದದ ವ್ಯಾಪ್ತಿಗೆ ಬರುವ ಎಲ್ಲಾ ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂದು 2014ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್ ರಾಜ್ಯಗಳಿಗೆ ಸೂಚಿಸಿತ್ತು.







