ಪುತ್ತೂರು ನಗರಸಭೆ : ಕಾಂಗ್ರೆಸ್ ಆಡಳಿತ, ಬಿಜೆಪಿ ಬಹುಮತ !

ಪುತ್ತೂರು,ಫೆ.15 : 27 ಸದಸ್ಯ ಕ್ಷೇತ್ರವನ್ನು ಹೊಂದಿರುವ ಪುತ್ತೂರು ನಗರಸಭೆಯ 6 ಸ್ಥಾನಗಳಿಗೆ ರವಿವಾರ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲ ಸಾಧಿಸಿದ್ದು, ಕಾಂಗ್ರೆಸ್ ತೆಕ್ಕೆಯಲ್ಲಿದ್ದ 6 ಸ್ಥಾನಗಳ ಪೈಕಿ 3 ಸ್ಥಾನಗಳನ್ನು ಕಸಿದುಕೊಳ್ಳುವ ಮೂಲಕ ಪುತ್ತೂರು ನಗರಸಭೆಯಲ್ಲಿ ಬಿಜೆಪಿ ಮತ್ತೆ ಬಹುಮತ ಸಾಧಿಸಿದೆ.
ಪಕ್ಷ ವಿರೋಧಿ ಚಟುವಟಿಕೆಯ ಹಿನ್ನಲೆಯಲ್ಲಿ ಪಕ್ಷಾಂತರ ನಿಷೇಧ ಕಾಯಿದೆಯಡಿ ಆರು ಮಂದಿ ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನರ್ಹಗೊಂಡಿದ್ದ ಹಿನ್ನಲೆಯಲ್ಲಿ ತೆರವಾಗಿದ್ದ ಆ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಚುನಾವಣೆಯ ಮತ ಎಣಿಕೆ ಕಾರ್ಯ ಬುಧವಾರ ನಡೆದಿದ್ದು, ಕಾಂಗ್ರೆಸ್ ತನ್ನ ತೆಕ್ಕೆಯಲ್ಲಿದ್ದ 6 ಸ್ಥಾನಗಳ ಪೈಕಿ 3 ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇದರಿಂದಾಗಿ ಬಿಜೆಪಿ ಸದಸ್ಯರ ಬಲ 15ಕ್ಕೆ ಏರಿದ್ದು, ಕಾಂಗ್ರೆಸ್ ಬಲ 15 ರಿಂದ 11 ಕ್ಕೆ ಕುಸಿದಿದೆ. ಓರ್ವ ಸದಸ್ಯೆ ಮತದಾನದ ಹಕ್ಕಿಲ್ಲದ ಸದಸ್ಯರಾಗಿ ಮುಂದುವರಿಯುತ್ತಿದ್ದಾರೆ.
ಈ ಹಿಂದೆ ನಡೆದಿದ್ದ ಚುನಾವಣೆಯಲ್ಲಿ ಪುತ್ತೂರು ಪುರಸಭೆಯ 27 ಸ್ಥಾನಗಳ ಪೈಕಿ ಕಾಂಗ್ರೆಸ್ 15ರಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೆ ಬಂದಿತ್ತು. ಆದರೆ ಮೊದಲ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ವೇಳೆ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್‌ನೊಳಗೆ ನಡೆದಿದ್ದ ಆಂತರಿಕ ಭಿನ್ನಮತದ ಪರಿಣಾಮವಾಗಿ ಬಂಡಾಯವಾಗಿ ಸ್ಫರ್ಧಿಸಿ ಬಿಜೆಪಿ ಬೆಂಬಲದೊಂದಿಗೆ ಅಧ್ಯಕ್ಷರಾಗಿದ್ದ ವಾಣಿ ಶ್ರೀಧರ್ ಅವರ ಸದಸ್ಯತ್ವವನ್ನು ಜಿಲ್ಲಾಧಿಕಾರಿಗಳ ನ್ಯಾಯಾಲಯ ಪಕ್ಷಾಂತರ ನಿಷೇಧ ಕಾಯಿದೆಯಡಿ ಅನರ್ಹಗೊಳಿಸಿತ್ತು. ಆದರೆ ಈ ಪ್ರಕರಣ ಇದೀಗ ಹೈಕೋರ್ಟು ಹಂತದಲ್ಲಿದ್ದು, ಮತ ಚಲಾಯಿಸುವ ಹಕ್ಕಿಲ್ಲದ ಷರತ್ತಿನೊಂದಿಗೆ ಅವರ ಸದಸ್ಯತ್ವ ಇನ್ನೂ ಊರ್ಜಿತದಲ್ಲಿದೆ.
ಈ ನಡುವೆಯೇ ಪುತ್ತೂರು ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿತ್ತು. ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ವೇಳೆ ಕಾಂಗ್ರೆಸ್‌ನೊಳಗೆ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿತ್ತು. ಅವಕಾಶ ಸಿಗದ ಹಿನ್ನಲೆಯಲ್ಲಿ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಇತರ 5 ಮಂದಿ ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಬಂಡಾಯವಾಗಿ ಸ್ಪರ್ಧಿಸಿ ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷರಾಗಿ ನಗರಸಭೆಯ ಪ್ರಥಮ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಪಕ್ಷ ವಿರೋಧಿ ಚಟುವಟಿಕೆಯ ಆರೋಪ ಹೊರಿಸಿ ಕಾಂಗ್ರೆಸ್ ಸದಸ್ಯ ಎಚ್.ಮಹಮ್ಮದ್ ಆಲಿ ಅವರು ನಡೆಸಿದ ಕಾನೂನು ಹೋರಾಟದ ಪರಿಣಾಮವಾಗಿ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮತ್ತು ಅವರ 5 ಮಂದಿ ಬೆಂಬಲಿಗ ಸದಸ್ಯರಾದ ನವೀನ್ ನಾಕ್ ಬೆದ್ರಾಳ, ಸೀಮಾ ಗಂಗಾಧರ್, ದೀಕ್ಷಾ ಪೈ, ಕಮಲಾ ಆನಂದ್ ಮತ್ತು ರೇಖಾ ಯಶೋಧರ್ ಅವರ ಸದಸ್ಯತ್ವ ರದ್ದುಗೊಂಡಿತ್ತು. ಈ ಹಿನ್ನಲೆಯಲ್ಲಿ ತೆರವಾಗಿದ್ದ ಸ್ಥಾನಗಳಿಗೆ ಇದೀಗ ಚುನಾವಣೆ ನಡೆದಿದ್ದು, ಕಾಂಗ್ರೆಸ್ ತನ್ನಲ್ಲಿದ್ದ 6 ಸ್ಥಾನಗಳ ಪೈಕಿ 3 ಸ್ಥಾನಗಳಲ್ಲಿ ಜಯಗಳಿಸಿ 3ಸ್ಥಾನಗಳನ್ನು ಬಿಜೆಪಿಗೊಪ್ಪಿಸಿದೆ.
ನಗರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳಾ ಮೀಸಲಾತಿಯ ಪರಿಣಾಮವಾಗಿ ಬಹುಮತ ಹೊಂದಿರುವ ಬಿಜೆಪಿಯಲ್ಲಿ ಈ ಮೀಸಲಾತಿಯ ಸದಸ್ಯರು ಇಲ್ಲದ ಕಾರಣ ಕಾಂಗ್ರೆಸ್‌ನ ಜಯಂತಿ ಬಲ್ನಾಡು ಅವರಿಗೆ ಲಭಿಸಿತ್ತು. ಆದರೆ ಇದೀಗ ಬಿಜೆಪಿ ಸದಸ್ಯರ ಬಲ ಏರಿಕೆಯಾಗಿದ್ದರೂ ಪರಿಶಿಷ್ಟ ಪಂಗಡಮ ಮಹಿಳಾ ಸದಸ್ಯರು ಇಲ್ಲದ ಕಾರಣ ಬಹುಮತವಿಲ್ಲದ ಕಾಂಗ್ರೆಸ್ ಮುಂದಿನ ಒಂದು ವರ್ಷದ ತನಕ ಆಡಳಿತ ನಡೆಸಲಿದೆ.







