ಪುತ್ರಿಯೊಂದಿಗೆ ಅಂಬೆಗಾಲಿಡುವ ಧೋನಿ ವಿಡಿಯೋ ವೈರಲ್!

ಹೊಸದಿಲ್ಲಿ, ಫೆ.15: ಎರಡು ವರ್ಷಗಳ ಹಿಂದೆ ಭಾರತದ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ ಹೆಣ್ಣು ಮಗುವಿನ ತಂದೆಯಾಗಿದ್ದರು. ಆಗ ಅವರು 50 ಓವರ್‌ಗಳ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಕ್ಕೆ ತೆರಳಿದ್ದರು. ಆಗಷ್ಟೇ ಹುಟ್ಟಿದ್ದ ಹೆಣ್ಣು ಮಗುವನ್ನು ನೋಡಲು ಅವರು ಭಾರತಕ್ಕೆ ಆಗಮಿಸಿರಲಿಲ್ಲ.
ವಿಶ್ವಕಪ್ ಕೊನೆಗೊಂಡ ಬಳಿಕ ಭಾರತಕ್ಕೆ ಆಗಮಿಸಿದ ಧೋನಿಯವರ ಬಳಿ ನೀವು ಭಾರತದಲ್ಲೇ ಇರಲು ಆದ್ಯತೆ ನೀಡುತ್ತೀರಾ? ಎಂದು ಸುದ್ದಿಗಾರರು ಪ್ರಶ್ನಿಸಿದ್ದರು. ಅದಕ್ಕೆ ನೇರ ಉತ್ತರ ನೀಡಿದ ಧೋನಿ,‘‘ನಿಜವಾಗಿಯೂ ಹಾಗೇನಿಲ್ಲ. ನನಗೆ ಹೆಣ್ಣು ಮಗು ಹುಟ್ಟಿದೆ. ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ. ಆದರೆ, ಇದೀಗ ನಾನು ರಾಷ್ಟ್ರೀಯ ಕರ್ತವ್ಯದಲ್ಲಿದ್ದೇನೆ. ನನಗಾಗಿ ಎಲ್ಲವೂ ಕಾದಿದೆ. ವಿಶ್ವಕಪ್ ನನಗೆ ಅತ್ಯಂತ ಮುಖ್ಯ ಅಭಿಯಾನವಾಗಿದೆ’’ ಎಂದು ಉತ್ತರಿಸಿದ್ದರು.
ಭಾರತದ ನಾಯಕನಾಗಿ ಧೋನಿಯ ಸಮರ್ಪಣಾಭಾವ ಎಲ್ಲರ ಶ್ಲಾಘನೆಗೆ ಒಳಗಾಗಿತ್ತು. ಕೆಲವರು ಅವರನ್ನು ಭಾವಶೂನ್ಯರು ಎಂದು ನಿಂದಿಸಿದ್ದರು. ‘‘ನನಗಾಗಿ ಎಲ್ಲವೂ ಕಾದಿದೆ’’ಎಂದು ಅವರು ನೀಡಿರುವ ಹೇಳಿಕೆ ಹೆಚ್ಚು ಲೆಕ್ಕಾಚಾರದಿಂದ ಕೂಡಿದ್ದಾಗಿ ಕಾಣುತ್ತಿದೆ. ಇದೀಗ ಅವರು ಕ್ರಿಕೆಟ್‌ನಿಂದ ಬಿಡುವು ಮಾಡಿಕೊಂಡು ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ.
ಮಂಗಳವಾರ ಧೋನಿ ಅವರು ತನ್ನ ಪುತ್ರಿಯೊಂದಿಗೆ ಅಂಬೆಗಾಡುತ್ತಿದ್ದ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್‌ನಲ್ಲಿ ಹಾಕಿದ್ದಾರೆ. ಧೋನಿ ಶೇರ್ ಮಾಡಿರುವ ವಿಡಿಯೋ ಅಂತರ್‌ಜಾಲದಲ್ಲಿ ಹೊಸ ಸಂಚಲನ ಮೂಡಿಸಿದೆ.
ಧೋನಿ ಫೆ.6 ರಂದು ಮುಸ್ಸೂರಿಯಲ್ಲಿ ಮಗಳ ಎರಡನೆ ವರ್ಷದ ಹುಟ್ಟುಹಬ್ಬವನ್ನು ಪತ್ನಿ ಹಾಗೂ ಕುಟುಂಬ ಸದಸ್ಯರೊಂದಿಗೆ ಆಚರಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಧೋನಿ ಪತ್ನಿ ಸಾಕ್ಷಿ ಎಲ್ಲ ಫೋಟೊಗಳನ್ನು ಶೇರ್ ಮಾಡಿದ್ದಾರೆ.







