ಉಡುಪಿ : ಜಿಲ್ಲೆಯಲ್ಲಿ ಶೀಘ್ರ ಜನೆರಿಕ್ ಔಷಧ ಕೇಂದ್ರ - ಸಚಿವ ಪ್ರಮೋದ್

ಉಡುಪಿ, ಫೆ.15: ಉಡುಪಿ ಅಜ್ಜರಕಾಡಿನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಶೀಘ್ರದಲ್ಲೇ ಅತಿ ಕಡಿಮೆ ಬೆಲೆಯಲ್ಲಿ ಔಷಧ ಮಾರಾಟ ಮಾಡುವ ಜನೆರಿಕ್ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಆರೋಗ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ ಜನೆರಿಕ್ ಔಷಧ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಶೀಘ್ರದಲ್ಲೇ ಕೇಂದ್ರವನ್ನು ತೆರೆಯಲಾ ಗುವುದು. ಈ ಕೇಂದ್ರದಲ್ಲಿ ರೋಗಿಗಳಿಗೆ ಮಾರುಕಟ್ಟೆ ಬೆಲೆಗಿಂತ ಅತ್ಯಂತ ಕಡಿಮೆ ದರದಲ್ಲಿ ಔಷಧಗಳು ಲ್ಯವಾಗಲಿವೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಿದ ಸಚಿವರು, ವಲಸೆ ಕಾರ್ಮಿಕ ಮಹಿಳೆಯರ ಆರೋಗ್ಯದ ಕುರಿತಂತೆ ವಿಶೇಷ ಗಮನ ಹರಿಸುವಂತೆ ಹಾಗೂ ವಿಶೇಷ ಅಭಿಯಾನ ಕೈಗೊಂಡು ಅವರನ್ನು ಗುರುತಿಸಿ ಸೇವೆ ಒದಗಿಸುವಂತೆ ಸೂಚಿಸಿದರು.
ಜಿಲ್ಲೆಯ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಾಗದಂತೆ ಹಾಗೂ ಔಷಧಗಳ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದ ಸಚಿವರು, ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕ್ರಮಗಳ ಪ್ರಚಾರ ಮಾಡುವಾಗ ಶಿಕ್ಷಣ ಇಲಾಖೆಯ ಸಹಕಾರ ಪಡೆಯುವಂತೆ ಹಾಗೂ ಇಲಾಖೆಯ ಸಮಸ್ಯೆಗಳ ಬಗ್ಗೆ ತಮ್ಮ ಗಮನಕ್ಕೆ ತರುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸಿಇಓ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಡಿಹೆಚ್‌ಓ ಡಾ.ರೋಹಿಣಿ ಹಾಗೂ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.







