ಮನೆಗೆ ಆಕಸ್ಮಿಕ ಬೆಂಕಿ : ಲಕ್ಷಾಂತರ ರೂ. ನಷ್ಟ

ಬೆಳ್ತಂಗಡಿ,ಫೆ.15: ಅಳದಂಗಡಿ ಸನಿಹದ ಒಬ್ಬೆದೊಟ್ಟು ಎಂಬಲ್ಲಿನ ವಾರಿಜಾ ಆಚಾರ್ತಿ ಎಂಬ ವರ ಮನೆಗೆ ಮಂಗಳವಾರ ತಡ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇದರಿಂದ ಮನೆ ಅರ್ಧ ಸುಟ್ಟು ಹೋಗಿ ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದೆ.
ವಾರಿಜಾ (75) ಎಂಬುವರು ಒಬ್ಬರೆ ವಾಸಿಸುತ್ತಿದ್ದು, ಮಂಗಳವಾರ ಬೆಳಿಗ್ಗೆ ಕಲ್ಲಡ್ಕದಲ್ಲಿರುವ ಮಗಳ ಮನೆಗೆ ಹೋಗಿದ್ದರು ಎನ್ನಲಾಗಿದೆ. ಮಧ್ಯರಾತ್ರಿಯ ಬಳಿಕ ಬೆಂಕಿ ಮೊದಲಿಗೆ ಮನೆಯ ಹಿಂಬದಿಯಲ್ಲಿನ ಕಟ್ಟಿಗೆ ಸಂಗ್ರಹದ ಕೊಟ್ಟಿಗೆಗೆ ತಗುಲಿ ಕಟ್ಟಿಗೆಯೆಲ್ಲಾ ಭಸ್ಮವಾಗಿದೆ. ಸನಿಹದಲ್ಲಿದ್ದ ಫೈಬರ್ ನೀರಿನ ತೊಟ್ಟಿ ಕರಗಿಹೋಗಿದೆ. ಬಳಿಕ ಬೆಂಕಿ ಮನೆಗೂ ವ್ಯಾಪಿಸಿ ಹಂಚಿನ ಮನೆ ಅರ್ಧ ಸುಟ್ಟು ಬೂದಿಯಾಗಿದೆ.
ಅಗ್ನಿಯ ಅವತಾರ ಕಂಡು ಸನಿಹದ ಮನೆಯವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ದಳದ ಸಿಬ್ಬಂದಿಗಳು ಬಂದು ಮನೆಯ ಇನ್ನುಳಿದ ಭಾಗ ಸುಟ್ಟುಹೋಗುವುದನ್ನು ತಪ್ಪಿಸಿದ್ದಾರೆ. ವಿಷಯ ತಿಳಿದ ವಾರಿಜಾ ಅವರು ಮುಂಜಾನೆ ಆಗಮಿಸಿದ್ದಾರೆ. ಅವರು ವಿದ್ಯುತ್ ಹಾಗು ಅಡುಗೆ ಅನಿಲದ ಸಂಪರ್ಕವನ್ನು ತೆಗೆದು ಹೋಗಿದ್ದರು. ಹೀಗಾಗಿ ಮನೆಗೆ ಬೆಂಕಿ ಹೇಗೆ ತಗುಲಿತು ಎನ್ನುವುದು ನಿಗೂಢವಾಗಿದೆ. ಬೆಳ್ತಂಗಡಿ ತಹಸೀಲ್ದಾರ್, ಅಳದಂಗಡಿ ಗ್ರಾ.ಪಂ.ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.





