ದಂಗೆಗಿಳಿಯುವವರನ್ನು ಸಹಿಸುವುದಿಲ್ಲ: ಮಮತಾ ಬ್ಯಾನರ್ಜಿ

ಕೊಲ್ಕತಾ,ಫೆ.15:ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿನ್ನೆ ಕಲಿಮ್ ಪೊಂಗ್‌ನ್ನು ಡಾರ್ಜಿಲಿಂಗ್ ಜಿಲ್ಲೆಯಿಂದ ವಿಭಜಿಸಿ ಹೊಸ ಜಿಲ್ಲೆಯನ್ನಾಗಿ ಔಪಚಾರಿಕವಾಗಿ ಘೋಷಿಸಿದ್ದಾರೆ. ಕಲಿಮ್‌ಪೊಂಗ್ ಪಶ್ಚಿಮಬಂಗಾಳದ 21ನೆ ಜಿಲ್ಲೆ ಎನಿಸಿಕೊಳ್ಳಲಿದೆ. ಅಭಿವೃದ್ಧಿ ಮತ್ತು ಸಿಲ್ಕ್ ರೂಟ್‌ನ ಮೂಲಕ ನೇಪಾಲ ಹಾಗೂ ಭೂತಾನ್ ದೇಶದೊಂದಿಗೆ ಜೋಡಿಸುವ ಭರವಸೆ ನೀಡಿದ್ದು, ಈ ಬಗ್ಗೆ ಶೀಘ್ರ ಕೆಲಸ ಆರಂಭಗೊಳ್ಳಲಿದೆ ಎಂದರು.
ಹೊಸದಾಗಿ ರಚನೆಯಾದ ಜಿಲ್ಲೆಯಲ್ಲಿ ರಸ್ತೆ ಮತ್ತು ನೀರಿನ ಸಮಸ್ಯೆಯನ್ನು ಪರಿಹರಿಸಲಾಗುವುದು. ಕಲಿಮ್‌ಪೊಂಗ್‌ನ ಜನರು ಶಾಂತಿಯಿಂದ ಜೀವಿಸಬೇಕೆಂದು ಅವರು ಕರೆ ನೀಡಿದ್ದಾರೆ. ಯಾವುದೇ ರೀತಿಯ ಹಿಂಸೆ ಇಲ್ಲಿ ಆಗಬಾರದು. ಕೋಮುವಾದಿ ಗಲಭೆ ಹರಡುವವರು ಮತ್ತು ಮಾಡುವವರ ವಿರುದ್ಧ ಸರಕಾರ ಕಠಿಣ ಕ್ರಮಕೈಗೊಳ್ಳಲಿದೆ ಎಂದು ಮಮತಾ ಹೇಳಿದರು.
ಯಾವುದೇ ಅಹಿತಕರ ಘಟನೆ ಕಂಡು ಬಂದರೆ ಸರಕಾರ ಸುಮ್ಮನಿರುವುದಿಲ್ಲ. ನೈಜ ಹಿಂದೂವಾಗಲಿ, ಮುಸ್ಲಿಂ ಆಗಲಿ ದಂಗೆಯನ್ನು ಬಯಸುವುದಿಲ್ಲ. ನಾವು ಯಾವಾಗಲೂ ಶಾಂತಿಯಲ್ಲಿ ವಿಶ್ಷಾಸವಿಡುತ್ತೇವೆ. ಜನರ ಉನ್ನತಿಯನ್ನು ಬಯಸುತ್ತೇವೆ. ಯಾರಾದರೂ ದಂಗೆಗೆ ಪ್ರಚೋದನೆ ನೀಡುವುದಾದರೆ ಅವರು ತಮ್ಮ ಪಕ್ಷದ ಲಾಭಕ್ಕಾಗಿ ಹಾಗೆ ಮಾಡುತ್ತಾರೆಂದು ಮಮತಾ ಬ್ಯಾನರ್ಜಿ ಹೇಳಿದರು ಎಂದು ವರದಿಯಾಗಿದೆ.





