ಉ.ಕೊರಿಯಾ ಅಧ್ಯಕ್ಷನ ಮಲಸೋದರನ ಕೊಲೆ ಪ್ರಕರಣ :ಮಲೇಶ್ಯದ ಶಂಕಿತ ಮಹಿಳೆಯ ಬಂಧನ

ವ್ಯೊಂಗ್‌ಯಾಂಗ್, ಫೆ.15: ಉತ್ತರ ಕೊರಿಯದ ಸರ್ವೋಚ್ಚ ನಾಯಕ ಕಿಮ್‌ಜೊಂಗ್ ಉನ್ ಅವರ ಪರಿತ್ಯಕ್ತ ಮಲಸಹೋದರ ಕಿಮ್‌ಜೊಂಗ್ ನಾಮ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಮಲೇಶಿಯಾದ ಪೊಲೀಸರು, ಸಂದೇಹಾಸ್ಪದ ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ.
ಮಲೇಶ್ಯದ ರಾಜಧಾನಿ ಕೌಲಾಲಂಪುರದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಕೆಯನ್ನು ಬಂಧಿಸಲಾಗಿದೆ. ಬಂಧಿತ ಮಹಿಳೆಯು ವಿಯೆಟ್ನಾಂ ಪಾಸ್‌ಪೋರ್ಟ್ ಹೊಂದಿದ್ದು, ಒಬ್ಬಂಟಿಯಾಗಿದ್ದಳೆಂದು ಮಲೇಶ್ಯ ಪೊಲೀಸರು ತಿಳಿಸಿದ್ದಾರೆ. ಆಕೆಯ ಹೆಸರು ಡೊನ್ ತಿ ಹುವಾಂಗ್ ಎಂದು ಪ್ರವಾಸಿ ದಾಖಲೆಗಳಿಂದ ತಿಳಿದುಬಂದಿರುವುದಾಗಿ ಅವರು ಹೇಳಿದ್ದಾರೆ.
ಕಿಮ್‌ಜೊಂಗ್ ನಾಮ್ ಅವರು ಮಂಗಳವಾರ ಕೌಲಾಲಂಪುರ ವಿಮಾನನಿಲ್ದಾಣದಲ್ಲಿ ಹಠಾತ್ತನೆ ಅಸ್ವಸ್ಥರಾಗಿದ್ದು, ಆಸ್ಪತ್ರೆ ದಾರಿಯಲ್ಲಿ ಸಾವನ್ನಪ್ಪಿದ್ದರು. ಅವರು ತಾನು ವಾಸವಾಗಿರುವ ಚೀನಾದ ಮಕಾವು ಪ್ರಾಂತಕ್ಕೆ ತೆರಳುವವರಿದ್ದರು. ಬಂಧಿತ ಮಹಿಳೆಯ ಜೊತೆಗಿದ್ದ ಇನ್ನೋರ್ವ ಮಹಿಳೆ ಹಾಗೂ ಇತರ ನಾಲ್ವರು ಪುರುಷರಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಕಿಮ್‌ಜೊಂಗ್-ನಾಮ್ ಕೊಲೆಯಲ್ಲಿ ಇವರೆಲ್ಲರೂ ಶಾಮೀಲಾಗಿರಬಹುದೆಂದು ಮಲೇಶ್ಯ ಪೊಲೀಸರು ಶಂಕಿಸಿದ್ದಾರೆ.
ಮೃತ ಕಿಮ್‌ಜೊಂಗ್ ನಾಮ್ ಅವರು ಉತ್ತರ ಕೊರಿಯ ನಾಯಕ ಕಿಮ್‌ಜೊಂಗ್ ಉನ್ ವಿರುದ್ಧ ಬಂಡಾಯವೇಳುವ ಇಚ್ಛೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿರಲಿಲ್ಲ. ಆದರೆ ಉತ್ತರ ಕೊರಿಯದಲ್ಲಿ ವಂಶಾಡಳಿತ ಮಾದರಿಯ ರಾಜಕೀಯವಿರುವುದನ್ನು ಅವರು ಟೀಕಿಸುತ್ತಿದ್ದರು.
ಈ ಮಧ್ಯೆ ದಕ್ಷಿಣ ಕೊರಿಯಾದ ಬೇಹುಗಾರಿಕಾ ಸಂಸ್ಥೆಯೊಂದು, ಉತ್ತರ ಕೊರಿಯದ ಇಬ್ಬರು ಮಹಿಳಾ ಏಜೆಂಟರು ಕಿಮ್‌ಜೊಂಗ್ ನಾಮ್ ಅವರನ್ನು ಕೊಲೆ ಮಾಡಿದ್ದಾರೆಂದು ಶಂಕಿಸಿರುವುದಾಗಿ, ದ.ಕೊರಿಯದ ಸಂಸದರು ತಿಳಿಸಿದ್ದಾರೆ.







