ಕಾನೂನಿನಲ್ಲಿ ಅವಕಾಶವಿದ್ದರೆ ಸ್ಥಳೀಯ ವಾಹನಕ್ಕೆ ವಿನಾಯಿತಿ : ಟೋಲ್ ಶುಲ್ಕ ವಿವಾದದ ಬಗ್ಗೆ ಪ್ರಮೋದ್

ಉಡುಪಿ, ಫೆ.15: ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಟೋಲ್‌ಗೇಟ್‌ಗಳಿಗೆ ಸಂಬಂಧಿಸಿದಂತೆ ಕರಾವಳಿ ಜಿಲ್ಲೆಗಳ ಸಚಿವರು, ಶಾಸಕರು, ಜನಪ್ರತಿನಿಧಿಗಳು, ನವಯುಗ ಕಂಪೆನಿಯ ಅಧಿಕಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ಕರೆಯುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರನ್ನು ವಿನಂತಿಸಿದ್ದು, ಅವರು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಪಡುಕೆರೆ ಸೇತುವೆ ಕಾಮಗಾರಿ ವೀಕ್ಷಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್, ಜಿಲ್ಲೆಯ ಹೆಜಮಾಡಿ ಹಾಗೂ ಸಾಸ್ತಾನ ಗುಂಡ್ಮಿ ಟೋಲ್‌ಗೇಟ್‌ಗಳಲ್ಲಿ ಸ್ಥಳೀಯ ಖಾಸಗಿ ವಾಹನಗಳಿಗೆ ಶುಲ್ಕದಲ್ಲಿ ರಿಯಾಯಿತಿ ಅಥವಾ ವಿನಾಯತಿ ನೀಡುವುದನ್ನು ನಿರ್ಧರಿಸಬೇಕಾಗಿರುವುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎ) ಎಂದವರು ಹೇಳಿದರು.
ಕಾನೂನಿನಲ್ಲಿ 5 ಕಿ.ಮೀ. ವ್ಯಾಪ್ತಿಯ ಸ್ಥಳೀಯ ವಾಹನಗಳಿಗೆ-ಕೆಎ 20, ಕೆಎ 19- ರಿಯಾಯಿತಿ ನೀಡಲು ಅವಕಾಶವಿದೆ. ಕಾನೂನಿನ ವ್ಯಾಪ್ತಿಯಲ್ಲಿ ಗರಿಷ್ಠ ರಿಯಾಯಿತಿ ದೊರಕಿಸಿಕೊಡಲು ಪ್ರಯತ್ನಿಸುತ್ತೇವೆ ಎಂದರು. ಆದರೆ ಇಲ್ಲಿ ಸಂಘಟನೆಗಳು ಸ್ಥಳೀಯ ವಾಹನಗಳಿಗೆ ಶುಲ್ಕದಿಂದ ವಿನಾಯಿತಿ ಕೇಳುತ್ತಿವೆಯಲ್ಲ ಎಂದು ಪ್ರಶ್ನಿಸಿದಾಗ, ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆಯಾ ಎಂದು ನೋಡಬೇಕು ಎಂದರು.
ಕಾನೂನನ್ನು ಮೀರಿ ನಾವು ಬೇಡಿಕೆ ಇಡಲು ಆಗುವುದಿಲ್ಲ. ವಿನಾಯಿತಿಗೆ ಅವಕಾಶವಿದ್ದರೆ ಖಂಡಿತ ಕೇಳಬಹುದು, ತೆಗೆಸಿಕೊಡಬಹುದು. ಆದರೆ ಮೊದಲು ಅದನ್ನು ತೋರಿಸಿಕೊಡಬೇಕು ಎಂದು ಪ್ರಮೋದ್ ನುಡಿದರು.
ಸುರತ್ಕಲ್ ಟೋಲ್‌ಗೇಟ್‌ನಲ್ಲಿ ವಿನಾಯಿತಿ ಇರುವ ಬಗ್ಗೆ ಅವರನ್ನು ಪ್ರಶ್ನಿಸಿದಾಗ, ಅದು ರಾ.ಹೆದ್ದಾರಿ ಪ್ರಾಧಿಕಾರದ ಸುಪರ್ದಿಯಲ್ಲಿದೆ. ಅದನ್ನು ಗುತ್ತಿಗೆಗೆ ನೀಡಲಾಗಿದ್ದು, ಗುತ್ತಿಗೆ ಪಡೆದ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಸ್ಥಳೀಯವಾಗಿ ಒಳ್ಳೆಯ ಹೆಸರು ಪಡೆಯಲು ಈ ವಿನಾಯಿತಿ ನೀಡುತಿದ್ದಾರೆ ಎಂಬ ಮಾತು ಕೇಳಿಬಂದಿದೆ ಎಂದರು.
ಸಾಸ್ತಾನ ಮತ್ತು ಹೆಜಮಾಡಿಗಳಲ್ಲಿ ಟೋಲ್‌ಗೇಟ್ ಇರುವುದರಿಂದ ಕೇವಲ 12 ಕಿ.ಮೀ. ದೂರದ ಸುರತ್ಕಲ್‌ನಲ್ಲಿ ಟೋಲ್‌ಗೇಟ್ ಇರುವುದನ್ನು ಪ್ರಶ್ನಿಸಬೇಕಾಗಿದೆ. ಈ ಬಗ್ಗೆ ಸುರತ್ಕಲ್‌ನ ನಮ್ಮ ಸಂಸದರಾದ ನಳಿನ್‌ಕುಮಾರ್ ಕಟೀಲ್ ಅದನ್ನು ಮುಚ್ಚಿಸಲು ಪ್ರಯತ್ನ ನಡೆಸಬೇಕು. ಅದರಿಂದ ಜನರಿಗೆ ತೊಂದರೆಯಾಗುತ್ತಿರುವುದರಿಂದ ಕೂಡಲೇ ಮುಚ್ಚಿಸಬೇಕು ಎಂದರು.
ಕುಡಿಯುವ ನೀರಿಗೆ ಆದ್ಯತೆ:ಜಿಲ್ಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರಿಗೆ ಸಮಸ್ಯೆ ಬಂದಿಲ್ಲ. ಆದರೆ ಸಮಸ್ಯೆ ಬಂದಾಗ ಅದಕ್ಕೆ ಪ್ರಥಮ ಆದ್ಯತೆ ನೀಡಿ ತಕ್ಷಣವೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ನಗರಸಭಾ ವ್ಯಾಪ್ತಿಯಲ್ಲಿ ಪೌರಾಯುಕ್ತರಿಗೆ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ಪಿಡಿಓಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಅದಕ್ಕೆ ಬೇಕಷ್ಟು ಹಣವನ್ನೂ ನೀಡಿದ್ದೇವೆ. ಆದರೂ ಉದಾಸೀನ ತೋರಿಸಿದರೆ ಅಂಥವರನ್ನು ತಕ್ಷಣವೇ ಅಮಾನತು ಮಾಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಬೋರ್‌ವೆಲ್ ನಿರ್ಮಾಣಕ್ಕೆ ಇದ್ದ ನಿಷೇಧವನ್ನು ಸರಕಾರ ವಾಪಾಸು ಪಡೆದಿದೆ. ಆದುದರಿಂದ ಖಾಸಗಿಯವರೂ ಸಹ ಬೋರ್‌ವೆಲ್ ಗಳನ್ನು ಕೊರೆಯಲು ಅವಕಾಶವಿದೆ ಎಂದರು. ಜಿಲ್ಲೆಯ ಮೂರು ತಾಲೂಕು ಗಳನ್ನು ಬರಪೀಡಿತ ಎಂದು ಘೋಷಿಸಿರುವ ಬಗ್ಗೆ ಪ್ರಶ್ನಿಸಿದಾಗ, ಇದರಿಂದ ಹೆಚ್ಚುವರಿ ಅನುದಾನ ಬಿಡುಗಡೆಯಾಗುತ್ತದೆ ಎಂದರು. ಪ್ರತಿ ಶಾಸಕರಿಗೆ ಕುಡಿಯುವ ನೀರಿಗೆ ಹೆಚ್ಚುವರಿ 20 ಲಕ್ಷ ರೂ. ಹಾಗೂ ಕೆರೆ ಸಂಜೀವಿನಿ ಯೋಜನೆಗೆ 18 ಲಕ್ಷ ರೂ. ಲಭಿಸುತ್ತದೆ ಎಂದು ಪ್ರಮೋದ್ ಹೇಳಿದರು.







