ಮಾ.11ಕ್ಕೆ ಪಡುಕೆರೆ ಸೇತುವೆ ಉದ್ಘಾಟನೆ: ಪ್ರಮೋದ್ ಮಧ್ವರಾಜ್

ಮಲ್ಪೆ, ಫೆ.15: ಮಲ್ಪೆ-ಪಡುಕರೆ ಪರಿಸರದ ಜನರ ಸುದೀರ್ಘ ಕಾಲದ ಬೇಡಿಕೆ ಹಾಗೂ ನಿರೀಕ್ಷೆಯಾದ ಪಡುಕೆರೆ ಸೇತುವೆ ಕೊನೆಗೂ ಉದ್ಘಾಟನೆಗೆ ಸಿದ್ಧವಾಗುತಿದ್ದು, ಮಾರ್ಚ್ 11ರ ಶನಿವಾರ ಸಂಜೆ 5:00 ಗಂಟೆಗೆ ತಾನು ಈ ಸೇತುವೆ ಹಾಗೂ ಮಲ್ಪೆ ಮತ್ತು ಪಡುಕೆರೆ ತುದಿಗಳಲ್ಲಿ ನಿರ್ಮಿಸಲಾದ ಸಂಪರ್ಕ ರಸ್ತೆಯನ್ನು ಉದ್ಘಾಟಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಬುಧವಾರ ಪಡುಕೆರೆ ಸೇತುವೆ ನಿರ್ಮಾಣಗೊಳ್ಳುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ ನಗರಸಭೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು.
ಒಟ್ಟು 16.5 ಕೋಟಿ ರೂ.ವೆಚ್ಚದ ಸೇತುವೆಯ ಕಾಮಗಾರಿ ಫೆ.25ರ ಸುಮಾರಿಗೆ ಮುಕ್ತಾಯಗೊಳ್ಳಲಿದ್ದು, ಬಳಿಕ ಕ್ಯೂರಿಂಗ್, ಪೈಂಟಿಂಗ್ ಹಾಗೂ ಇತರ ಕೆಲಸಗಳಿಗೆ 10 ದಿನಗಳ ಅಗತ್ಯವಿರುವುದಾಗಿ ಗುತ್ತಿಗೆದಾರರಾದ ಯೋಜಕ ಇಂಡಿಯಾದ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಮಾ.11ರಂದು ಸೇತುವೆಯ ಉದ್ಘಾಟನೆ ನಡೆಯಲಿದೆ ಎಂದವರು ತಿಳಿಸಿದರು. ಗುತ್ತಿಗೆದಾರರಿಗೆ ಈಗಾಗಲೇ 13.5 ಕೋಟಿ ರೂ.ಗಳನ್ನು ಪಾವತಿಸಲಾಗಿದೆ. ಪ್ರಾಯಶ: ದೇಶದ ಇತಿಹಾಸದಲ್ಲಿ ಸೇತುವೆ ಮುಗಿಯುವ ಮೊದಲೇ ಒಟ್ಟು ವೆಚ್ಚದ ಶೇ.80ರಷ್ಟು ಮೊತ್ತವನ್ನು ನೀಡಿರುವುದು ಇದೇ ಮೊದಲಿರಬಹುದು ಎಂದು ಪ್ರಮೋದ್ ನುಡಿದರು.
ಪಡುಕೆರೆ ಸೇತುವೆ ನಿರ್ಮಾಣಕ್ಕೆ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಯಾವುದೇ ಪೂರ್ವಸಿದ್ಧತೆಗಳಿಲ್ಲದೇ ಅನುಮೋದನೆ ನೀಡಲಾಗಿತ್ತು. ಆದರೆ 2013ರ ಮೇ ತಿಂಗಳಲ್ಲಿ ನಾನು ಶಾಸಕನಾದ ಬಳಿಕ ನಿಜವಾದ ಕೆಲಸ ಪ್ರಾರಂಭವಾಗಿದ್ದು, ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿಗಳಿಂದ ಬೇಕಾದ 13.5ಕೋಟಿ ರೂ.ಗಳಿಗೆ ಮಂಜೂರಾತಿ ಪಡೆದುಕೊಂಡಿದ್ದೆ ಎಂದರು.
ಇದರೊಂದಿಗೆ ಸೇತುವೆಯ ವಿನ್ಯಾಸವನ್ನು ಬದಲಿಸಬೇಕಾಯಿತು. ಮೊದಲಿದ್ದ ಸೇತುವೆಯ ಅಗಲ 4.25ಮೀ.ನ್ನು 5.25ಕ್ಕೆ ಹೆಚ್ಚಿಸಿದ್ದಲ್ಲದೇ, ಕೆಳಗಿನಿಂದ ಬೋಟು, ದೋಣಿಗಳು ಹಾದು ಹೋಗಲು ಅನುಕೂಲವಾಗುವಂತೆ ಸೇತುವೆಯ ಎತ್ತರವನ್ನು ಸಹ ಹೆಚ್ಚಿಸಲಾಯಿತು. ಇದರಿಂದ 13.5 ಕೋಟಿ ರೂ.ಗಳ ಮೂಲ ವೆಚ್ಚ 16.5 ಕೋಟಿ ರೂ.ಗಳಿಗೆ ಏರಿದೆ. ಇದಕ್ಕೆ ಬೇಕಾದ ಹೆಚ್ಚುವರಿ 3 ಕೋಟಿ ರೂ. ಮೊತ್ತವೂ ಈಗಾಗಲೇ ಮಂಜರಾಗಿದೆ. ಅದೀಗ ಕ್ಯಾಬಿನೆಟ್ ಒಪ್ಪಿಗೆಗೆ ಕಾದಿದೆ. ಶೀಘ್ರದಲ್ಲಿ ಅದೂ ದೊರಕಲಿದೆ ಎಂದರು.
ಇದರೊಂದಿಗೆ ಅಲ್ಲದೇ ಸೇತುವೆಗೆ ಸಂಪರ್ಕ ರಸ್ತೆ ನಿರ್ಮಿಸಲು ಪಡುಕೆರೆ ಯಲ್ಲಿ 50 ಲಕ್ಷ ರೂ. ಮಲ್ಪೆಯ ಅಯ್ಯಪ್ಪ ದೇವಾಲಯದಿಂದ ಸೇತುವೆಯವರೆಗೆ ಡಾಮಾರು ರಸ್ತೆ ನಿರ್ಮಾಣಕ್ಕೆ 60 ಲಕ್ಷ ರೂ. ಮಂಜೂರಾಗಿದ್ದು, ವಾರದೊಳಗೆ ಇದೂ ನಡೆಯಲಿದೆ ಎಂದು ಪ್ರಮೋದ್ ತಿಳಿಸಿದರು.
ಪ್ರವಾಸಿ ತಾಣವಾಗಿ ಪಡುಕೆರೆ: ಸೇತುವೆಯ ನಿರ್ಮಾಣದೊಂದಿಗೆ ಮೂಲಸ್ವರೂಪದ ಸೌಂದರ್ಯವನ್ನು ಉಳಿಸಿಕೊಂಡಿರುವ ಪಡುಕೆರೆ ಬೀಚ್‌ನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಪಡುಕೆರೆ ಬೀಚ್‌ನ್ನು ಮಲ್ಪೆ ಅಭಿವೃದ್ಧಿ ಸಮಿತಿಯ ಸುಪರ್ದಿಗೆ ಸೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ಇದು ಸೇತುವೆ ಉದ್ಘಾಟನೆಯೊಂದಿಗೆ ಆಗಲಿದೆ ಎಂದರು. ಸಂಪರ್ಕ ಸೇತುವೆ ನಿರ್ಮಾಣದಿಂದ ಪಡುಕರೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆ ಅಭಿವೃದ್ಧಿಗೊಳ್ಳಲಿದ್ದು, ಮುಂಬರುವ ದಿನಗಳಲ್ಲಿ ಪಡುಕರೆಯನ್ನು ಆಕರ್ಷಕ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಸೇತುವೆ ವಿಷಯವನ್ನು ಕೆಲವರು ರಾಜಕೀಯ ಉದ್ದೇಶಕ್ಕೆ ಬೇಳೆ ಬೇಯಿಸಿ ಕೊಳ್ಳಲು ಪ್ರಯತ್ನಿಸಿದ್ದು, ಅವರ ಶ್ರಮ ವಿಫಲವಾಗಿದೆ ಎಂದು ಪ್ರಮೋದ್ , ಬಿಜೆಪಿ ನಾಯಕರನ್ನು ಛೇಡಿಸಿದರು.
ಈಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಸಂಧ್ಯಾ ತಿಲಕರಾಜ್, ಜಿಪಂ ಸದಸ್ಯ ಜನಾರ್ದನ ತೋನ್ಸೆ, ಪೌರಾಯುಕ್ತ ಮಂಜುನಾಥಯ್ಯ, ಸೇತುವೆ ನಿರ್ಮಾಣ ಸಂಸ್ಥೆ ಯೋಜಕ ಇಂಡಿಯಾದ ನಿರ್ದೇಶಕ ವಿನಯಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಕೇಶವ ಕೋಟ್ಯಾನ್ ಹಾಗೂ ಸ್ಥಳೀಯ ಮೀನುಗಾರರ ಮುಖಂಡರು ಹಾಜರಿದ್ದರು.







