ಚೀನಾ: ಶಂಕಿತ ಉಗ್ರರಿಂದ ಚಾಕು ದಾಳಿಗೆ ಮೂವರು ಬಲಿ

ಬೀಜಿಂಗ್,ಫೆ.15: ಚೀನಾದ ದುರ್ಗಮ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಮತ್ತೆ ಹಿಂಸಾಚಾರ ಸ್ಪೋಟಿಸಿದ್ದು, ಮಂಗಳವಾರ ಶಂಕಿತ ಉಗ್ಯುರ್ ಬಂಡುಕೋರರು ಚಾಕುವಿನಿಂದ ದಾಳಿ ನಡೆಸಿ, ಮೂವರು ನಾಗರಿಕರನ್ನು ಹತ್ಯೆಗೈದಿದ್ದಾರೆ. ಈ ಮೂವರು ಬಂಡುಕೋರರನ್ನು ಪೊಲೀಸರು ಆನಂತರ ಗುಂಡಿಕ್ಕಿ ಹತ್ಯೆಗೈದಿದ್ದಾರೆಂದು ಹೊಟಾನ್ ಪ್ರಾಂತ ಸರಕಾದ ಅಧಿಕೃತ ವೆಬ್‌ಸೈಟ್ ವರದಿ ಮಾಡಿದೆ.
ಪಿಶಾನ್ ಪಟ್ಟಣದಲ್ಲಿ ಮಂಗಳವಾರ ಸಂಜೆ, ಈ ದಾಳಿ ನಡೆದಿದೆ. ಕನಿಷ್ಠ 10 ಮಂದಿ ಚೂರಿ ಇರಿತದಿಂದಾಗಿ ಗಾಯಗೊಂಡಿದ್ದು, ಅವರಲ್ಲಿ ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ದಾಳಿಕೋರರಲ್ಲಿ ಮೂವರನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದು, ಅಲ್ಲೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಹಾಗೂ ಘಟನೆಯ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ಹಾಂಕಾಂಗ್‌ನ ಸೌತ್‌ಚೀನಾ ಪೋಸ್ಟ್ ಪತ್ರಿಕೆಯು ವರದಿ ಮಾಡಿದೆ.
ಉಗ್ಯುರ್ ಪ್ರಾಂತವು ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಅಫ್ಘಾನಿಸ್ತಾನದ ಗಡಿಗೆ ತಾಗಿಕೊಂಡಿದೆ. ಕಳೆದ ಕೆಲವು ವರ್ಷಗಳಿಂದ ಬೀಜಿಂಗ್‌ನ ಆಡಳಿತವು ದೇಶದ ವಿವಿಧೆಡೆಯಿಂದ ಹನ್ ಬುಡಕಟ್ಟಿನ ಚೀನಿಯರನ್ನು ಉಗ್ಯುರ್‌ಗೆ ಕರೆತಂದು ನೆಲೆಗೊಳಿಸುತ್ತಿರುವುದರ ವಿರುದ್ಧ ಹಲವು ವರ್ಷಗಳಿಂದ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ.







