ಬೆಲೆ ಕುಸಿದ ಹತಾಶೆ : ಈರುಳ್ಳಿ ಹೊಲಕ್ಕೆ ಬೆಂಕಿ ಹಚ್ಚಿದ ರೈತ

ನಾಶಿಕ್, ಫೆ.15: ಈರುಳ್ಳಿಗೆ ಬೆಲೆ ಕುಸಿದ ಕಾರಣ ಹತಾಶೆಗೊಂಡ ರೈತನೋರ್ವ ಈರುಳ್ಳಿ ಹೊಲಕ್ಕೆ ಬೆಂಕಿ ಹಚ್ಚಿದ ಘಟನೆ ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿ ನಡೆದಿದೆ.
ನಾಶಿಕ್ ಜಿಲ್ಲೆಯ ನಾಗರ್‌ಸುಲ್ ಎಂಬ ಊರಿನ ರೈತ ಕೃಷ್ಣ ಡೋಂಗರೆ ಎಂಬಾತ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ತನ್ನ 2.5 ಎಕ್ರೆ ಹೊಲದಲ್ಲಿ ಈರುಳ್ಳಿ ಬೆಳೆದಿದ್ದ. ಆದರೆ ಹರಾಜಿನ ವೇಳೆ ಈರುಳ್ಳಿ ಕೊಳ್ಳಲು ವರ್ತಕರು ಹಿಂದೇಟು ಹಾಕಿದ್ದಾರೆ. ಈ ಹಂತದಲ್ಲಿ ಈರುಳ್ಳಿ ಮಾರಿದರೆ ತನಗೆ ಕೇವಲ 60 ಸಾವಿರ ರೂ. ಸಿಗಬಹುದು ಎಂದು ತಿಳಿದುಬಂದಾಗ ಹತಾಶನಾದ ಕೃಷ್ಣ ಡೋಂಗರೆ, ಈರುಳ್ಳಿ ಹೊಲಕ್ಕೆ ಬೆಂಕಿ ಹಚ್ಚಿ ಸುಟ್ಟುಬಿಟ್ಟಿರುವುದಾಗಿ ತಿಳಿಸಿದ್ದಾನೆ.
ಕೆಲವೆಡೆ ಈರುಳ್ಳಿ ಬೆಲೆ ಕ್ವಿಂಟಾಲಿಗೆ 100ರಿಂದ 150 ರೂ.ಗೆ ಕುಸಿದಿದೆ. ರೈಲ್ವೇ ವ್ಯಾಗನ್‌ಗಳ ಕೊರತೆಯಿರುವುದರಿಂದ ಈರುಳ್ಳಿಯನ್ನು ದೇಶದ ವಿವಿಧೆಡೆ ಸಾಗಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಎಪಿಎಂಸಿ ಕೇಂದ್ರಗಳು ಈರುಳ್ಳಿಯ ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.
ಕಳೆದ ಕೆಲ ದಿನಗಳಿಂದ ಈರುಳ್ಳಿ ಬೆಲೆ ತೀವ್ರವಾಗಿ ಕುಸಿಯುತ್ತಿದ್ದು ಕೃಷಿಕರು ಬೆಳೆಗೆ ವೆಚ್ಚ ಮಾಡಿದ ಹಣವನ್ನೂ ಮರಳಿ ಪಡೆಯಲು ಸಾಧ್ಯವಾಗದ ಪರಿಸ್ಥಿತಿಯಿದೆ ಎಂದು ಲಸಲ್‌ಗಾಂವ್ ಎಪಿಎಂಸಿ ಅಧ್ಯಕ್ಷ ಜಯದತ್ತ ಹೋಳ್ಕರ್ ಹೇಳಿದ್ದಾರೆ.
ಈರುಳ್ಳಿಗೆ ಬೆಲೆ ಕುಸಿಯಲು ನೋಟುಗಳ ಅಮಾನ್ಯೀಕರಣ ಕೂಡಾ ಕಾರಣ ಎಂದು ಆರೋಪಿಸಿರುವ ರೈತರು, ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ.







