ಶಿವಮೊಗ್ಗ: ಗಾಂಜಾ ಮಾರಾಟಕ್ಕೆ ಯತ್ನಿಸಿದ ಇಬ್ಬರ ಬಂಧನ

ಶಿವಮೊಗ್ಗ, ಫೆ. 15: ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, 1 ಕೆ.ಜಿ.ಗೂ ಅಧಿಕ ತೂಕದ ಗಾಂಜಾವನ್ನು ವಶಕ್ಕೆ ಪಡೆದ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಜಕ್ಕಿನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಬಾಳೂರು ಗ್ರಾಮದ ನಿವಾಸಿಗಳಾದ ಸತೀಶ್ ನಾಯ್ಕಾ (25) ಹಾಗೂ ನಾಗ್ಯನಾಯ್ಕಾ (40) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಆರೋಪಿಗಳಿಬ್ಬರು ಗಾಂಜಾ ಮಾರಾಟದಲ್ಲಿ ತೊಡಗಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆಯವರಿಗೆ ಮೂಲಗಳಿಂದ ಬಂದ ಖಚಿತ ವರ್ತಮಾನದ ಮೇರೆಗೆ ಶಿಕಾರಿಪುರ ಇನ್‌ಸ್ಪೆಕ್ಟರ್ ಹರೀಶ್ ಕೆ. ಪಾಟೀಲ್, ಎಎಸ್ಸೈ ಆದಪ್ಪ ಮತ್ತು ಸಿಬ್ಬಂದಿ ಜಕ್ಕಿನ ಕೊಪ್ಪಗ್ರಾಮದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಸತೀಶ್ ನಾಯ್ಕಿ ಮತ್ತು ನಾಗ್ಯನಾಯ್ಕಿರನ್ನು ವಶಕ್ಕೆ ಪಡೆದು ಸಾವಿರಾರು ರೂ. ಮೌಲ್ಯದ 1 ಕೆ. ಜಿ. 200 ಗ್ರಾಂ ತೂಕದ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಬ್ಬರು ಯಾರಿಗೂ ಗೊತ್ತಾಗದ ರೀತಿಯಲ್ಲಿ ಕೃಷಿ ಜಮೀನಿನಲ್ಲಿ ಗಾಂಜಾ ಬೆಳೆಸಿ, ಮಾರಾಟ ಮಾಡುತ್ತಿದ್ದ ವಿಷಯ ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ.







