6,500 ಪಶು ವೈದ್ಯರ ಶೀಘ್ರ ನೇರ ನೇಮಕಾತಿ: ಸಚಿವ ಎ. ಮಂಜು

ಶಿವಮೊಗ್ಗ, ಫೆ. 15: ರಾಜ್ಯದ ಪಶು ಆಸ್ಪತ್ರೆಗಳಲ್ಲಿ ಖಾಲಿಯಿರುವ ಪಶು ವೈದ್ಯರ ನೇಮಕಕ್ಕೆ ಕ್ರಮಕೈಗೊಳ್ಳಲಾಗಿದ್ದು, ಶೀಘ್ರ ನೇರ ನೇಮಕಾತಿಯ ಮೂಲಕ 6,500 ವೈದ್ಯರ ನೇಮಕ ಮಾಡಲಾಗುವುದು ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಎ. ಮಂಜು ತಿಳಿಸಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದಅವರು, ರಾಜ್ಯದ ಬಹುತೇಕ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದೆ. ಇದನ್ನು ನೀಗಿಸಲು 6,500 ವೈದ್ಯರನ್ನು ನೇರ ನೇಮಕಾತಿ ಮಾಡಿಕೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು. ರಾಜ್ಯದ 1,690 ಪಶು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ, ಎಲ್ಲ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಲು ನಿರ್ಧರಿಸಲಾಗಿದೆ.
ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜಿಗೆ ನಿಯಮಾನುಸಾರ ಕಲ್ಪಿಸಬೇಕಾದ ಎಲ್ಲ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜೊತೆಗೆ ಕಾಲೇಜಿಗೆ ಮಾನ್ಯತೆ ಪಡೆಯಲಾಗಿದೆ. ಇದರಿಂದ ವಿದ್ಯಾರ್ಥಿಗಳು ಎದುರಿಸುತ್ತಿದ್ದ ಅತಂತ್ರ ಪರಿಸ್ಥಿತಿ ಕೊನೆಯಾಗಿದೆ ಎಂದರು. ಇತ್ತೀಚೆಗೆ ಜಾನುವಾರಗಳಿಗೆ ಹರಡುತ್ತಿದ್ದ ನಿಗೂಢ ಕಾಯಿಲೆಯಿಂದ ಹಲವಾರು ಜಾನುವಾರುಗಳು ಮೃತಪಡುತ್ತಿದ್ದವು.
ವಿಶೇಷವಾಗಿ ಶಿವಮೊಗ್ಗ ಭಾಗದಲ್ಲಿ ಮಲೆನಾಡ ಗಿಡ್ಡ ತಳಿಯ ಜಾನುವಾರುಗಳನ್ನು ನಿಗೂಢ ಕಾಯಿಲೆಯಿಂದ ರಕ್ಷಿಸಬೇಕಿದೆ. ಈ ಹಿನ್ನೆಲೆಯಲ್ಲಿ ಜಾನುವಾರುಗಳ ನಿಗೂಢ ಕಾಯಿಲೆ ಸಂಶೋಧನಾ ಕೇಂದ್ರ ಆರಂಭಿಸಲಾಗಿದೆ.
ಇದಕ್ಕಾಗಿ ಈಗಾಗಲೇ ಒಂದು ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದ್ದು, ಕಾಲೇಜ್‌ನ ಮುಖ್ಯಸ್ಥರು ಸಲ್ಲಿಸಿರುವ ಪ್ರಸ್ತಾವನೆಯಂತೆ ಐದು ವರ್ಷಕ್ಕೆ 50 ಕೋಟಿ ರೂ. ಅನುದಾನ ಒದಗಿಸಿ ಪೂರ್ಣ ಪ್ರಮಾಣದಲ್ಲಿ ಈ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು. ಈಗಾಗಲೇ ಪ್ರತಿ ತಾಲೂಕಿಗೆ 20 ಲಕ್ಷ ರೂ. ವೆಚ್ಚದಲ್ಲಿ ಮೇವು ಖರೀದಿಸಲು ಜಿಲ್ಲಾಧಿಕಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.
ರೈತರಿಂದ 6 ಸಾವಿರ ರೂ.ಗೆ ಒಣ ಹುಲ್ಲು ಖರೀದಿಸಿ 2 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ನಾಲ್ಕು ಲಕ್ಷ ಪ್ಯಾಕೇಟ್ ಮೇವು ಬೀಜಗಳನ್ನು ವಿತರಿಸಲಾಗಿದ್ದು, ರೈತರು ಬೆಳೆದ ಹಸಿ ಮೇವನ್ನೂ ಖರೀದಿಸಲಾಗುವುದು. ರೈತರ ಹೊಲಗಳಲ್ಲಿ ವ್ಯರ್ಥವಾಗುವ ಜೋಳದ ಕಟ್ಟಿ, ಇನ್ನಿತರ ಮೇವು ಪದಾರ್ಥಗಳನ್ನು ಖರೀದಿಸಿ ರಸಮೇವಾಗಿ ರೂಪಿಸಲಾಗುವುದು ಎಂದರು. ರೈತರ ಉಪ ಕಸುಬುಗಳಾದ ಹೈನುಗಾರಿಕೆ ಮತ್ತು ರೇಷ್ಮೆ ಬೆಳೆಗೆ ರಾಜ್ಯ ಸರಕಾರ ಅತಿ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ.
ರಾಜ್ಯದ 9 ಲಕ್ಷ ಹಾಲು ಉತ್ಪಾದಕರಿಗಾಗಿ 1 ಸಾವಿರ ಕೋಟಿ ರೂ. ಪ್ರೋತ್ಸಾಹ ಧನವನ್ನು ಸರಕಾರ ವಿತರಿಸಿದ್ದು, ರೈತರು ಈ ಯೋಜನೆಯ ಪ್ರಯೋಜನ ಪಡೆಯಬೇಕು ಎಂದರು.
ಅಲ್ಲದೆ 4.5 ಕೋಟಿ ರೂ. ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತಿದೆ. ದೇಸೀ ತಳಿ ರಾಸುಗಳ ರಕ್ಷಣೆಗಾಗಿ ಶಿವಮೊಗ್ಗ ಡೈರಿಗೆ ಒಂದು ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಗೋಷ್ಠಿಯಲ್ಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಬೀದರ್ ಕರ್ನಾಟಕ ಪಶು ವೈದ್ಯಕೀಯ, ಪಶು, ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಪೊ. ಆರ್.ವಿ. ಪ್ರಸಾದ್, ಪಶು ವೈದ್ಯಕೀಯ ಕಾಲೇಜ್‌ನ ಡೀನ್ ಪ್ರೊ. ಕೆ.ಸಿ. ವೀರಣ್ಣ,ಕೇಂದ್ರದ ಪ್ರಧಾನ ಸಂಶೋಧಕ ಪ್ರೊ. ಎನ್.ಬಿ. ಶ್ರೀಧರ್, ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಯುಕ್ತ ಶೇಖರ್, ನಿರ್ದೇಶಕ ಮುಹಮ್ಮದ್ ಜಫುಲ್ಲಾ ಖಾನ್, ಉಪ ನಿರ್ದೇಶಕ ಡಾ. ಭಾಸ್ಕರ್ ನಾಯ್ಕೊ ಮೊದಲಾದವರಿದ್ದರು.







