ಇಂದು ಮತ್ತು ನಾಳೆ ಕೊಡಗು ಜಿಲ್ಲಾ ಮುಸ್ಲಿಮ್ ಸಮ್ಮೇಳನ
ವಿವಿಧ ಧಾರ್ಮಿಕ ಮುಖಂಡರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ
ಕುಶಾಲನಗರ, ಫೆ:15: ಪಟ್ಟಣದ ಜಾಮಿಯಾ ಮಸೀದಿ ವತಿಯಿಂದ ಫೆ.16 ಮತ್ತು 17ರಂದು ಕುಶಾಲನಗರದ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕೊಡಗು ಜಿಲ್ಲಾ ಮುಸ್ಲಿಮ್ ಸಮ್ಮೇಳನಕ್ಕೆ ಸಂಬಂಧಿಸಿದಂತೆ ವಿವಿಧ ಧಾರ್ಮಿಕ ಮುಖಂಡರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಪಪಂ ಅಧ್ಯಕ್ಷ ಎಂ.ಎಂ.ಚರಣ್ ಮಾತನಾಡಿ, ಸಮ್ಮೇಳನದಲ್ಲಿ ಯಾವುದೇ ಗೊಂದಲಗಳು ಸೃಷ್ಟಿಯಾಗದಂತೆ ನೆರವೇರಿಸಲು ನಮ್ಮ ಸಹಕಾರವಿರುತ್ತದೆ.
ಎರಡು ದಿನದ ಈ ಸಮ್ಮೇಳನದಲ್ಲಿ ಎಲ್ಲ ಮುಸ್ಲಿಮ್ ಬಾಂಧವರು ಭಾಗವಹಿಸಬೇಕೆಂದು ಅವರು ಹೇಳಿದರು. ಬಳಿಕ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರಬಾಬು ಮಾತನಾಡಿ, ಮಾನವ ಕುಲ ಒಂದೇ ಎಂಬುದ
ನ್ನು ಮರೆಯುತ್ತಿರುವ ನಾವುಗಳು ತಮ್ಮನ್ನು ತಾವೇ ದ್ವೇಷಿಸುವ ದೃಷ್ಟಿಯಲ್ಲಿ ನಿಂತಿದ್ದೇವೆ. ಕೆಲ ತಿಂಗಳುಗಳ ಹಿಂದೆ ನಡೆದ ಗಲಭೆಗಳನ್ನು ಮರೆತು ಜಾತಿ, ಧರ್ಮ ಒಂದೇ ಎಂಬ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು.
ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬದುಕಬೇಕು ಎಂದರು. ಕೊಡಗು ಜಿಲ್ಲಾ ಕಾಂಗ್ರೆಸ್‌ನ ಕಾರ್ಮಿಕ ಘಟಕದ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಇಸ್ಲಾಮ್ ಧರ್ಮವು ಹಲವು ಟೀಕೆಗಳಿಗೆ ಗುರಿಯಾಗುತ್ತಿರುವುದು ದುರಂತವಾಗಿದೆ. ಎಲ್ಲರೂ ಒಂದೇ ಎಂಬ ಭಾವನೆಗಳು ನಮ್ಮಲ್ಲಿ ಇರಬೇಕು. ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲಾ ಧರ್ಮದ ಬಾಂಧವರು ಅವರ ಸಿದ್ಧಾಂತಗಳಂತೆ ನಡೆದುಕೊಳ್ಳುತ್ತಾರೆ ಎಂದರು.
ಕುಶಾಲನಗರ ಜಾಮಿಯಾ ಮಸೀದಿ ಅಧ್ಯಕ್ಷ ಅಲೀಂ ಮಾತನಾಡಿ, ಮುಸ್ಲಿಮರ ಪವಿತ್ರ ಗ್ರಂಥ ಕುರ್‌ಆನ್‌ನ ಆಚಾರ ವಿಚಾರಗಳನ್ನು ತಿಳಿದುಕೊಳ್ಳುವ ಸಲುವಾಗಿ ಮುಸ್ಲಿಮ್ ಬಾಂಧವರಿಗೆ ಇಸ್ತೆಮಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತೀ ವರ್ಷವೂ ಜಿಲ್ಲೆಯ ವಿವಿಧ ಕಡೆ ನಡೆಯುತ್ತಿದ್ದು, ಈ ಬಾರಿ ಜಾಮಿಯಾ ಮಸೀದಿ ವತಿಯಿಂದ ಕುಶಾಲನಗರದಲ್ಲಿ ನಡೆಸಲು ತೀರ್ಮಾನಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಗಣಪತಿ ದೇವಾಲಯದ ಅಧ್ಯಕ್ಷ ವಸಂತ್‌ಕುಮಾರ್, ಪಪಂ ಉಪಾಧ್ಯಕ್ಷ ಶರವಣಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಂಜು, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪಿ.ಕೆ.ಜಗದೀಶ್, ನಗರಾಧ್ಯಕ್ಷ ಅಣ್ಣಯ್ಯ, ಗೆಳೆಯರ ಬಳಗದ ಜಿಲ್ಲಾಧ್ಯಕ್ಷ ಆನಂದ್‌ಕುಮಾರ್, ಬಿಜೆಪಿ ಮುಖಂಡರಾದ ಪುಂಡರಿಕಾಕ್ಷ, ಸತ್ಯನಾರಾಯಣ್, ನಾರಾಯಣ, ಅಬ್ದುಲ್ ಖಾದರ್, ನಝೀರ್ ಅಹ್ಮದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.







