ಯಕ್ಷಗಾನದ ಸಿಂಹಕ್ಕೆ ಬೆಚ್ಚಿಬಿದ್ದ ಪ್ರೇಕ್ಷಕ!
.jpg)
ಮೂಡುಬಿದಿರೆ, ಫೆ.15: ಮಲಗಿ ನಿದ್ದೆಯಲ್ಲಿದ್ದ ಪ್ರೇಕ್ಷಕನ ಮುಂದೆ ಯಕ್ಷಗಾನದ ಸಿಂಹ ವೇಷವೊಂದು ಮಂಡಿಯೂರಿ ಘರ್ಜಿಸಿದ ಪರಿಣಾಮ ಆತ ಬೆಚ್ಚಿಬಿದ್ದು ಅಸ್ವಸ್ಥಗೊಂಡ ಪ್ರಕರಣ ಮಾರೂರಿನಲ್ಲಿ ಕಳೆದ ಶನಿವಾರ ರಾತ್ರಿ ನಡೆದಿದೆ. ಆದರೆ ಸಕಾಲಿಕವಾಗಿ ಪ್ರೇಕ್ಷಕನನ್ನು ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ಆತ ಚೇತರಿಸಿದ ಘಟನೆ ನಡೆದಿದೆ.
ಅಂದು ಮಾರೂರಿನಲ್ಲಿ ಸಾರ್ವಜನಿಕ ಶ್ರೀ ಶನೀಶ್ವರ ಪೂಜಾ ಕಾರ್ಯಕ್ರಮ. ಸಮಿತಿಯ ವತಿಯಿಂದ ಎಡನೀರು ಮೇಳದ ಯಕ್ಷಗಾನ ಪ್ರದರ್ಶವಿತ್ತು. ತಡರಾತ್ರಿ 4ರ ಸುಮಾರಿಗೆ ಜಾಂಬವತಿ ಕಲ್ಯಾಣ ಪ್ರಸಂಗ ನಡೆದ ವೇಳೆಗೆ ಬೇಟೆಯ ಸನ್ನಿವೇಶ. ಕೊನೆಯ ಸಾಲುಗಳಲ್ಲಿ ಸೊಂಪಾಗಿ ನಿದ್ದೆಯಲ್ಲಿದ್ದವರೆನ್ನೆಲ್ಲ ಎಬ್ಬಿಸುತ್ತಾ ಘರ್ಜಿಸುತ್ತಾ ಯಕ್ಷ ಸಿಂಹವೊಂದು ರಂಗಸ್ಥಳದತ್ತ ನುಗ್ಗಿ ಬಂತು.
ಎದುರು ಸಾಲಲ್ಲೇ ನಿದ್ದೆಗೆ ಜಾರಿದ್ದ ವ್ಯಕ್ತಿಯೋರ್ವರನ್ನು ಸಿಂಹ ಕಂಡು, ಅವರತ್ತ ತೆರಳಿ ಮಂಡಿಯೂರಿ ಘರ್ಜಿಸಿ ಎಬ್ಬಿಸಿ ರಾಳ ಹುಡಿ ಬಿಸಾಕಿ ಬೆಂಕಿ ಎಬ್ಬಿಸಿ ರಂಗಸ್ಥಳಕ್ಕೆ ಏರಿದೆ. ಆದರೆ ಇಷ್ಟಾಗುವುದರೊಳಗೆ ನಿದ್ದೆಯಿಂದ ಎಚ್ಚರಗೊಂಡು ಸಿಂಹವನ್ನು ಕಂಡ ವ್ಯಕ್ತಿ ನೆಲಕ್ಕೊರಗಿದ್ದಾರೆ. ಕೈಕಾಲು ಬಡಿದು ಚಡಪಡಿಸಿದ್ದಾರೆ. ತಕ್ಷಣ ಸಂಘಟಕರೆಲ್ಲ ಸೇರಿಕೊಂಡು ಅವರಿಗೆ ಪ್ರಥಮ ಚಿಕಿತ್ಸೆ ಮಾಡಲು ಮುಂದಾಗಿದ್ದಾರೆ. ಆದರೆ ಅವರು ಚೇತರಿಕೆ ಕಾಣದ ಪರಿಣಾಮ ಸಂಘಟಕರು ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಮೂರು ದಿನಗಳ ಬಳಿಕ ಪ್ರೇಕ್ಷಕ ಆಸ್ಪತ್ರೆಯಿಂದ ಸುರಕ್ಷಿತವಾಗಿ ಬಿಡುಗಡೆ ಹೊಂದಿದ್ದಾರೆ ಎನ್ನುವಲ್ಲಿಗೆ ಪ್ರಕರಣ ಸುಖಾಂತ್ಯವಾಗಿದೆ. ಪ್ರಸಂಗ ಮುಂದುವರಿಯಿತಾದರೂ ಬಳಿಕ ಸಿಂಹದ ಮೂಡ್ ಆಪ್ ಆಗಿತ್ತು ಎನ್ನುವುದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ ಯಕ್ಷಾಂಗಣದಲ್ಲಿ ಸಿಂಹದ ಬೇಟೆಯ ಅಪರೂಪದ ಪ್ರಸಂಗ ವಾಟ್ಸ್ ಆ್ಯಪ್ ಮೂಲಕ ಹರಿದಾಡುತ್ತಲೇ ಇದೆ.







