ಶಿವಮೊಗ್ಗದಲ್ಲಿ ಸರಗಳ್ಳರ ಹಾವಳಿ
ಮಾಂಗಲ್ಯ ಸರ ಅಪಹರಣ
ಶಿವಮೊಗ್ಗ, ಫೆ.15: ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರಿದಿದೆ. ಇತ್ತೀಚೆಗೆ ಪೊಲೀಸರೆಂದು ಹೇಳಿಕೊಂಡು ಮಹಿಳೆಯರ ಚಿನ್ನಾಭರಣ ವಂಚಿಸಿದ್ದ ಎರಡು ಘಟನೆಗಳು ನಡೆದಿದ್ದು, ಇಲ್ಲಿಯವರೆಗೆ ಆ ಸರಗಳ್ಳರ ಸುಳಿವು ಲಭ್ಯವಾಗಿಲ್ಲ. ಇದರ ನಡುವೆಯೇ ಇದೀಗ ಬೈಕ್‌ನಲ್ಲಿ ಆಗಮಿಸಿದ ಇಬ್ಬರು ಸರಗಳ್ಳರು ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೊಬ್ಬರ ಮಾಂಗಲ್ಯ ಸರ ಅಪಹರಿಸಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಕೀರ್ತಿನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಉಮಾದೇವಿ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆಯಾಗಿದ್ದು, ಕಳವಾದ ಸರದ ಮೌಲ್ಯ ಸರಿಸುಮಾರು 40 ಗ್ರಾಂ ತೂಕದ್ದಾಗಿದೆ. ಈ ಸಂಬಂಧ ವಿನೋಬಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್ಸೈಗೂ ನಾಗರಾಜ್‌ನ ಆತ್ಮಹತ್ಯೆ ಯತ್ನಕ್ಕೂ ಸಂಬಂಧವಿಲ್ಲ: ಸ್ಪಷ್ಟನೆ
ದಾವಣಗೆರೆ, ಫೆ.15: ಸಬ್‌ಇನ್‌ಸ್ಪೆಕ್ಟರ್ ಶ್ರೀಧರ್‌ಗೂ ತನ್ನ ಸಹೋದರ ಆತ್ಮಹತ್ಯೆ ಯತ್ನ ನಡೆಸಿದ್ದಕ್ಕೂ ಯಾವುದೇ ಸಂಬಂಧವಿಲ್ಲವೆಂದು ನಾಗರಾಜ್‌ನ ಸಹೋದರಿ ವನಿತಾ ತಿಳಿಸಿದರು. ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಲೋಕಿಕೆರೆಯ ನಾಗರಾಜ್(26) ಆತ್ಮಹತ್ಯೆಗೆ ಯತ್ನಿಸಿದ್ದರಿಂದ ನೊಂದು ಮಾಯಕೊಂಡ ಠಾಣೆ ಸಬ್‌ಇನ್‌ಸ್ಪೆಕ್ಟರ್ ವಿರುದ್ಧ ತಾವು ಆರೋಪಿಸಿದ್ದು, ಈ ಪ್ರಕರಣಕ್ಕೆ ಹಾಗೂ ಎಸ್ಸೈ ಶ್ರೀಧರ್‌ಗೂ ಯಾವುದೇ ಸಂಬಂಧವಿಲ್ಲ. ಅಂದು ತೀವ್ರ ನೊಂದಿದ್ದ ತಾವು ಎಸ್ಸೈ ವಿರುದ್ಧ ಆರೋಪ ಮಾಡಿದ್ದೆವು ಎಂದು ಸ್ಪಷ್ಟಪಡಿಸಿದರು.
ಸಿಟಿ ಸೆಂಟ್ರಲ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ನ ಸಹೋದರ ನಾಗರಾಜ ಬದುಕಬೇಕು. ನಿತ್ಯ ಸಾಕಷ್ಟು ಹಣ ಚಿಕಿತ್ಸೆಗಾಗಿ ಖರ್ಚಾಗುತ್ತಿದೆ. ನಮಗೆ ಯಾರ ಬಗ್ಗೆಯೂ ಅಸಮಾಧಾನವಿಲ್ಲ. ಅನುಮಾನವೂ ಇಲ್ಲ. ನಮಗೆ ನಾಗರಾಜ ಉಳಿದರೆ ಸಾಕು ಎಂದರು.
ಗೋಷ್ಠಿಯಲ್ಲಿ ನಾಗರಾಜನ ತಾಯಿ ನಾಗಮ್ಮ, ಸ್ನೇಹಿತ ಪ್ರವೀಣ ಮತ್ತಿತರರಿದ್ದರು.







